ಚಳಿಗಾಲದ ಚಹಾದೊಂದಿಗೆ ಸವಿಯಲು ಇರಲಿ ಈ ಗರಿಗರಿಯಾದ ಆಲುಗಡ್ಡೆ ಸ್ನ್ಯಾಕ್ಸ್!

ಭಾನುಪ್ರಿಯ ಡಿ.ಕೆ

ಚಳಿಗಾಲದ ಚಹಾದೊಂದಿಗೆ ಸವಿಯಲು ಇರಲಿ ಈ ಗರಿಗರಿಯಾದ ಆಲುಗಡ್ಡೆ ಸ್ನ್ಯಾಕ್ಸ್!

ಚಳಿಗಾಲದ ತಂಪಾದ ವಾತಾವರಣದಲ್ಲಿ ಬಿಸಿಬಿಸಿಯಾದ ಆಲುಗಡ್ಡೆ ತಿಂಡಿಗಳನ್ನು ಸವಿಯುವುದೇ ಒಂದು ಮಜಾ. ಈ ತಿಂಡಿಗಳು ಚಳಿಯನ್ನು ಆನಂದಿಸುವುದರ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ.

ಗರಿಗರಿಯಾದ ಆಲೂ ಪಕೋಡ

ಚಹಾ ಸಮಯದ ಅತ್ಯುತ್ತಮ ಸಂಗಾತಿ ಎಂದರೆ ಆಲೂ ಪಕೋಡ. ತೆಳುವಾಗಿ ಹೆಚ್ಚಿದ ಆಲುಗಡ್ಡೆ ಸ್ಲೈಸ್‌ಗಳನ್ನು ಕಡಲೆಹಿಟ್ಟಿನ ಮಸಾಲೆಯಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದರೆ, ಅದರ ರುಚಿಯೇ ಅದ್ಭುತ. ಇದನ್ನು ಪುದೀನಾ ಚಟ್ನಿಯೊಂದಿಗೆ ಸವಿಯಬಹುದು.

ಬಿಸಿಬಿಸಿ ಆಲೂ ಪರೋಟ

ಚಳಿಗಾಲದ ಬೆಳಗಿನ ಉಪಾಹಾರಕ್ಕೆ ಆಲೂ ಪರೋಟಕ್ಕಿಂತ ಬೆಸ್ಟ್ ಯಾವುದೂ ಇಲ್ಲ. ಮ್ಯಾಶ್ ಮಾಡಿದ ಆಲುಗಡ್ಡೆಗೆ ಶುಂಠಿ, ಹಸಿಮೆಣಸಿನಕಾಯಿ ಮತ್ತು ಮಸಾಲೆ ಸೇರಿಸಿ ತಯಾರಿಸಿದ ಪರೋಟವನ್ನು ಬೆಣ್ಣೆ ಅಥವಾ ಮೊಸರಿನ ಜೊತೆ ತಿಂದರೆ ಹೊಟ್ಟೆಯೂ ತುಂಬುತ್ತದೆ, ಮನಸ್ಸಿಗೂ ಹಿತ ನೀಡುತ್ತದೆ.

ಸ್ಪೈಸಿ ಆಲೂ ಟಿಕ್ಕಿ

ಸಂಜೆ ಹೊತ್ತಿಗೆ ಚಾಟ್ ಮಾದರಿಯ ತಿಂಡಿ ಇಷ್ಟಪಡುವವರಿಗೆ ಆಲೂ ಟಿಕ್ಕಿ ಸೂಕ್ತ. ಬೇಯಿಸಿದ ಆಲುಗಡ್ಡೆಯನ್ನು ಸ್ಮ್ಯಾಶ್ ಮಾಡಿ, ಗರಿಗರಿಯಾಗಿ ಹುರಿದು ಅದರ ಮೇಲೆ ಮೊಸರು, ಹುಣಸೆಹಣ್ಣಿನ ಚಟ್ನಿ ಮತ್ತು ಸೇವ್ ಹಾಕಿದರೆ ಅದ್ಭುತ ಚಾಟ್ ಸಿದ್ಧ.

ಆಲೂ ಬೋಂಡಾ

ದಕ್ಷಿಣ ಭಾರತದ ಮನೆಮನೆಗಳಲ್ಲಿ ಪ್ರಸಿದ್ಧವಾದ ಈ ತಿಂಡಿ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ಆಲುಗಡ್ಡೆಯ ಪಲ್ಯವನ್ನು ಉಂಡೆ ಮಾಡಿ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕರಿಯಲಾಗುತ್ತದೆ. ಬಿಸಿ ಕಾಫಿಯೊಂದಿಗೆ ಇದು ಸ್ವರ್ಗೀಯ ಅನುಭವ ನೀಡುತ್ತದೆ.

ಫ್ರೆಂಚ್ ಫ್ರೈಸ್

ಮನೆಯಲ್ಲೇ ತಯಾರಿಸಿದ ಬಿಸಿಬಿಸಿ ಫ್ರೆಂಚ್ ಫ್ರೈಸ್ ಮಕ್ಕಳು ಹಾಗೂ ದೊಡ್ಡವರಿಗೆಲ್ಲರಿಗೂ ಅಚ್ಚುಮೆಚ್ಚು. ಆಲುಗಡ್ಡೆ ಚೂರುಗಳ ಮೇಲೆ ಸ್ವಲ್ಪ ಉಪ್ಪು ಮತ್ತು ಪೆಪ್ಪರ್ ಅಥವಾ ಪೆರಿ-ಪೆರಿ ಮಸಾಲೆ ಉದುರಿಸಿ ಸವಿಯಬಹುದು.