ಅತಿಯಾದ ಬಿಸಿಲು ದೇಹದ ಮೇಲೆ ಬೀರುವ ದುಷ್ಪರಿಣಾಮಗಳು

ವಿನಾಯಕ ನಾಯಕ

ಅತಿಯಾದ ಬಿಸಿಲು ದೇಹದ ಮೇಲೆ ಬೀರುವ ದುಷ್ಪರಿಣಾಮಗಳು

ತೀವ್ರವಾದ ಶಾಖವು ದೇಹದ ಆಂತರಿಕ ಉಷ್ಣಾಂಶವನ್ನು ಹೆಚ್ಚಿಸಿ, ನಿರ್ಜಲೀಕರಣ ಮತ್ತು ಸುಸ್ತಿಗೆ ಕಾರಣವಾಗುತ್ತದೆ. ತಾಪಮಾನ ಏರಿದಾಗ ಹೃದಯದ ಬಡಿತ ವೇಗವಾಗಿ, ಮೆದುಳು ಮತ್ತು ಕಿಡ್ನಿಗಳ ಮೇಲೆ ಒತ್ತಡ ಬೀಳುತ್ತದೆ.

ನಿರ್ಜಲೀಕರಣ

ಹೆಚ್ಚಿನ ತಾಪಮಾನವಿದ್ದಾಗ ದೇಹವನ್ನು ತಂಪಾಗಿಸಲು ನಮಗೆ ಅತಿಯಾಗಿ ಬೆವರುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದಿಂದ ನೀರು ಮತ್ತು ಅಗತ್ಯ ಲವಣಗಳು ಹೊರಹೋಗುತ್ತವೆ. ಇದರಿಂದ ಬಾಯಾರಿಕೆ, ಸುಸ್ತು ಮತ್ತು ತಲೆಸುತ್ತು ಕಾಣಿಸಿಕೊಳ್ಳುತ್ತದೆ.

ಸುಸ್ತಾಗುವುದು

ದೇಹವು ಅತಿಯಾದ ಶಾಖಕ್ಕೆ ಒಡ್ಡಿಕೊಂಡಾಗ ನಿಮಗೆ ಸುಸ್ತಾದ ಅನುಭವವಾಗುತ್ತದೆ. ಅತಿಯಾದ ಬೆವರುವಿಕೆ, ವೇಗದ ನಾಡಿಬಡಿತ, ವಾಕರಿಕೆ, ಸ್ನಾಯು ಸೆಳೆತ ಮತ್ತು ತಲೆನೋವು.ಈ ಹಂತದಲ್ಲಿ ತಕ್ಷಣ ತಂಪಾದ ಜಾಗಕ್ಕೆ ಹೋಗಿ ನೀರು ಕುಡಿಯುವುದು ಅವಶ್ಯಕ.

ಹೀಟ್ ಸ್ಟ್ರೋಕ್

ಇದು ಅತ್ಯಂತ ಅಪಾಯಕಾರಿ ಸ್ಥಿತಿ. ದೇಹದ ಉಷ್ಣಾಂಶವು 40°C (104°F) ಗಿಂತ ಹೆಚ್ಚಾದಾಗ ದೇಹದ ಆಂತರಿಕ ನಿಯಂತ್ರಣ ವ್ಯವಸ್ಥೆಯು ವಿಫಲವಾಗುತ್ತದೆ.

ರಕ್ತಪರಿಚಲನೆಯ ಮೇಲೆ ಒತ್ತಡ

ಬಿಸಿಯಾದಾಗ ದೇಹವು ರಕ್ತವನ್ನು ಚರ್ಮದ ಮೇಲ್ಮೈಗೆ ತಳ್ಳಲು ಪ್ರಯತ್ನಿಸುತ್ತದೆ. ಇದರಿಂದ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಇದು ಹೃದಯದ ಕಾಯಿಲೆ ಇರುವವರಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ.

ಮೂತ್ರಪಿಂಡಗಳ ಮೇಲೆ ಪರಿಣಾಮ

ನಿರ್ಜಲೀಕರಣದಿಂದಾಗಿ ಮೂತ್ರಪಿಂಡಗಳ ಮೇಲೆ ಒತ್ತಡ ಬೀಳುತ್ತದೆ. ದೀರ್ಘಕಾಲದವರೆಗೆ ಅತಿಯಾದ ಶಾಖಕ್ಕೆ ಒಡ್ಡಿಕೊಳ್ಳುವುದು ಮೂತ್ರಪಿಂಡದ ಕಲ್ಲುಗಳು ಅಥವಾ ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.