ಬಿಸಿಲಿನಿಂದ ಕೆಂಪಾದ ಮುಖಕ್ಕೆ ಸರಳ ಮನೆಮದ್ದುಗಳು!

ಭಾನುಪ್ರಿಯ ಡಿ.ಕೆ

ಬಿಸಿಲಿನಿಂದ ಕೆಂಪಾದ ಮುಖಕ್ಕೆ ಸರಳ ಮನೆಮದ್ದುಗಳು!

ಬೇಸಿಗೆಯ ತೀವ್ರ ಬಿಸಿಲು ಮತ್ತು ಯುವಿ (UV) ಕಿರಣಗಳಿಂದಾಗಿ ಮುಖದ ಚರ್ಮ ಕೆಂಪಾಗುವುದು, ಉರಿ ಅಥವಾ ತುರಿಕೆ ಕಾಣಿಸಿಕೊಳ್ಳುವುದು ಸಹಜ.

ಅಲೋವೆರಾ ಜೆಲ್

ಅಲೋವೆರಾ ನೈಸರ್ಗಿಕವಾಗಿ ತಂಪು ನೀಡುವ ಗುಣವನ್ನು ಹೊಂದಿದೆ. ಇದು ಬಿಸಿಲಿನಿಂದ ಉಂಟಾದ ಉರಿಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ.

ಸೌತೆಕಾಯಿ ರಸ

ಸೌತೆಕಾಯಿಯಲ್ಲಿ ಶೇ. 95% ನೀರಿನಾಂಶವಿದ್ದು, ಇದು ಚರ್ಮದ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಸೌತೆಕಾಯಿಯನ್ನು ತುರಿದು ಅದರ ರಸವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಇದು ಕೆಂಪಾದ ಚರ್ಮಕ್ಕೆ ತಂಪು ನೀಡುತ್ತದೆ.

ತಣ್ಣನೆಯ ಹಾಲು

ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಮತ್ತು ಪ್ರೋಟೀನ್‌ಗಳು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತವೆ. ಒಂದು ಬೌಲ್‌ನಲ್ಲಿ ತಣ್ಣನೆಯ ಹಾಲನ್ನು ತೆಗೆದುಕೊಂಡು, ಅದರಲ್ಲಿ ಮೃದುವಾದ ಬಟ್ಟೆಯನ್ನು ಅದ್ದಿ ಮುಖದ ಮೇಲೆ ಇರಿಸಿ. 10 ನಿಮಿಷಗಳ ನಂತರ ಮುಖ ತೊಳೆಯಿರಿ.

ಗಂಧದ ಲೇಪ

ಗಂಧವು ಪುರಾತನ ಕಾಲದಿಂದಲೂ ಚರ್ಮದ ಉರಿ ಮತ್ತು ಕೆಂಪಾಗುವಿಕೆಗೆ ಬಳಸುವ ಅತ್ಯುತ್ತಮ ಮದ್ದು. ಶುದ್ಧ ಗಂಧದ ಪುಡಿಗೆ ಸ್ವಲ್ಪ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ.

ಹಸಿರು ಚಹಾ ಬ್ಯಾಗ್‌ಗಳು

ಗ್ರೀನ್ ಟೀಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಬಿಸಿಲಿನಿಂದ ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿ. ನಂತರ ಅದನ್ನು ಕೆಂಪಾದ ಜಾಗದಲ್ಲಿ ಮೆಲ್ಲಗೆ ಒತ್ತಿ. ಇದು ಊತ ಮತ್ತು ಕೆಂಪಾಗುವಿಕೆಯನ್ನು ಬೇಗನೆ ಕಡಿಮೆ ಮಾಡುತ್ತದೆ.