ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಇರಿಸಿ, ಈ ಕಾಯಿಲೆಗಳನ್ನು ಓಡಿಸಿ!

ಭಾನುಪ್ರಿಯ ಡಿ.ಕೆ

ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಇರಿಸಿ, ಈ ಕಾಯಿಲೆಗಳನ್ನು ಓಡಿಸಿ!

ವಿಟಮಿನ್ ಸಿ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಪ್ರಮುಖ ಪೋಷಕಾಂಶವಾಗಿದೆ. ಬಲಿಷ್ಠ ರೋಗನಿರೋಧಕ ಶಕ್ತಿ ಹಾಗೂ ಉತ್ತಮ ಆರೋಗ್ಯಕ್ಕೆ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ.

ಪದೇ ಪದೇ ಕಾಡುವ ಸೋಂಕುಗಳು

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ನೆಗಡಿ, ಶ್ವಾಸಕೋಶದ ಸೋಂಕುಗಳು ಬೇಗನೆ ಆವರಿಸಿಕೊಳ್ಳುತ್ತವೆ. ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಸನ್ನದ್ಧಗೊಳಿಸುತ್ತದೆ.

ಚರ್ಮದ ಸಮಸ್ಯೆಗಳು

ವಿಟಮಿನ್ ಸಿ ಕೊರತೆಯಾದಾಗ ಚರ್ಮವು ತೇವಾಂಶವನ್ನು ಕಳೆದುಕೊಂಡು ನಿಸ್ತೇಜವಾಗುತ್ತದೆ. ವಿಟಮಿನ್ ಸಿ ದೇಹದಲ್ಲಿ ಕೊಲಾಜೆನ್ ಎಂಬ ಪ್ರೊಟೀನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯುತ್ತದೆ.

ರಕ್ತಹೀನತೆ

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಾದಾಗ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ನಾವು ಸೇವಿಸುವ ಸಸ್ಯಹಾರಿ ಆಹಾರದಲ್ಲಿರುವ ಕಬ್ಬಿಣಾಂಶವನ್ನು ದೇಹವು ಸರಿಯಾಗಿ ಹೀರಬೇಕಾದರೆ ವಿಟಮಿನ್ ಸಿ ಅತ್ಯಗತ್ಯ. ಆದ್ದರಿಂದ ವಿಟಮಿನ್ ಸಿ ಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಸುಧಾರಿಸುತ್ತದೆ ಮತ್ತು ದಣಿವು, ಸುಸ್ತು ದೂರವಾಗುತ್ತದೆ.

ಒಸಡುಗಳಲ್ಲಿ ರಕ್ತಸ್ರಾವ

ಹಲ್ಲು ಮತ್ತು ಒಸಡುಗಳ ಆರೋಗ್ಯಕ್ಕೆ ವಿಟಮಿನ್ ಸಿ ಅತ್ಯಂತ ಮುಖ್ಯ. ಇದರ ತೀವ್ರ ಕೊರತೆಯಿಂದ 'ಸ್ಕರ್ವಿ' ಎಂಬ ಕಾಯಿಲೆ ಬರಬಹುದು. ಇದರ ಲಕ್ಷಣವಾಗಿ ಒಸಡುಗಳು ದುರ್ಬಲಗೊಂಡು ರಕ್ತ ಸೋರುವುದು, ಹಲ್ಲುಗಳು ಸಡಿಲವಾಗುವುದು. ಹಾಗಾಗಿ ವಿಟಮಿನ್ ಸಿ ನಿಯಮಿತ ಸೇವನೆಯಿಂದ ಒಸಡುಗಳನ್ನು ಬಲಿಷ್ಠವಾಗಿಡಬಹುದು.

ಗಾಯಗಳು ಬೇಗನೆ ಒಣಗದಿರುವುದು

ನಿಮ್ಮ ದೇಹದಲ್ಲಿ ಎಲ್ಲಾದರೂ ಚಿಕ್ಕಪುಟ್ಟ ಗಾಯಗಳಾದಾಗ ಅವು ಬೇಗನೆ ವಾಸಿಯಾಗದಿದ್ದರೆ, ಅದಕ್ಕೆ ವಿಟಮಿನ್ ಸಿ ಕೊರತೆಯೂ ಒಂದು ಕಾರಣವಿರಬಹುದು. ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ವಿಟಮಿನ್ ಸಿ ಬೇಕೇ ಬೇಕು. ಇದು ಗಾಯಗಳು ಹಾಗೂ ಉರಿಯೂತವನ್ನು ಬೇಗನೆ ಗುಣಪಡಿಸಲು ನೆರವಾಗುತ್ತದೆ.