ದಾಂಪತ್ಯದಲ್ಲಿ ಸಂವಹನ ಇರಲಿ, ಮೌನದ ಗೋಡೆ ಬೇಡ

ಸವಿನಾ ನಾಯ್ಕ

ದಾಂಪತ್ಯದಲ್ಲಿ ಸಂವಹನ ಇರಲಿ, ಮೌನದ ಗೋಡೆ ಬೇಡ

ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಜಗಳಗಳು ಸಹಜ. ಆದರೆ, ಜಗಳವನ್ನು ಬಗೆಹರಿಸದೆ ನಿದ್ದೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ" ಎಂಬ ಮನಸ್ಥಿತಿ ಸಂಬಂಧಕ್ಕೆ ವಿಷವಾಗಬಹುದು. ಮನಶ್ಶಾಸ್ತ್ರಜ್ಞರ ಪ್ರಕಾರ, ಕೋಪದೊಂದಿಗೇ ಮಲಗುವುದು ಮೆದುಳಿನ ಮೇಲೆ ಮತ್ತು ಸಂಬಂಧದ ಮೇಲೆ ದೀರ್ಘಕಾಲದ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮಾನಸಿಕ ಒತ್ತಡ ಮತ್ತು ಅಸಮಾಧಾನ

ದಂಪತಿ ಜಗಳ ಬಗೆಹರಿಸದೆ ಮಲಗುವುದರಿಂದ ಸರಿಯಾದ ನಿದ್ದೆ ಬರುವುದಿಲ್ಲ. ಇದು ಮರುದಿನ ಕೆಲಸದ ಮೇಲೆ ಪರಿಣಾಮ ಬೀರುವುಲ್ಲದೆ, ಕಿರಿಕಿರಿ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಸಂಬಂಧದಲ್ಲಿ ಬಿರುಕು

ಜಗಳ ಬಗೆಹರಿಯದಿದ್ದಾಗ, ಅದು ಒಳಗೊಳಗೆ ಕುದಿಯುತ್ತಾ ಸಣ್ಣ ವಿಷಯವೂ ದೊಡ್ಡದಾಗಿ ಮಾರ್ಪಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಸಂಗಾತಿಯ ಮೇಲೆ ಗೌರವ ಕಡಿಮೆಯಾಗಿ, ಪರಸ್ಪರ ದೂರವಾಗುವ ಸಾಧ್ಯತೆ ಇರುತ್ತದೆ.

ಆರೋಗ್ಯದ ಮೇಲೆ ಪರಿಣಾಮ

ಒತ್ತಡದ ಪರಿಸ್ಥಿತಿಯಲ್ಲಿ ಮಲಗುವುದರಿಂದ ರಕ್ತದೊತ್ತಡ ಹೆಚ್ಚಾಗುವುದು, ತಲೆನೋವು ಮತ್ತು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ.

ತಬ್ಬಿಕೊಳ್ಳುವುದು ಅವರ ಕೋಪವನ್ನು ಶಮನ!

ನಿಮ್ಮ ಕೋಪವನ್ನು ಬದಿಗಿಟ್ಟು ಅವರನ್ನು ಪ್ರೀತಿಯಿಂದ ತಬ್ಬಿಕೊಳ್ಳುವುದು ಅವರ ಕೋಪವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ, ನೀವು ತುಂಬಾ ಕೋಪಗೊಂಡಾಗ ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವಂತಹ ಸರಳ ಕೆಲಸವು ಸಹ ಅತಿಯಾಗಿ ತೋರುತ್ತದೆ.

ಪರಿಹಾರಗಳೇನು?

ಸಾಧ್ಯವಾದಷ್ಟು ಜಗಳ ನಡೆದ ದಿನವೇ ಅದನ್ನು ಮಾತುಕತೆಯ ಮೂಲಕ ಅಂತ್ಯಗೊಳಿಸಿ."ನಾವು ಎಷ್ಟೇ ಜಗಳವಾಡಿದರೂ ಮಾತನಾಡಿಯೇ ಮಲಗುತ್ತೇವೆ" ಎಂಬ ಒಪ್ಪಂದ ನಿಮ್ಮ ನಡುವೆ ಇರಲಿ. ತಪ್ಪು ಯಾರದ್ದೇ ಇರಲಿ, ಸಂಬಂಧ ಉಳಿಸಿಕೊಳ್ಳಲು "ಸಾರಿ" ಎನ್ನುವುದು ದೊಡ್ಡ ಗುಣ. ಪ್ರೀತಿ ಎಂದರೆ ಕೇವಲ ಸಂತೋಷ ಹಂಚಿಕೊಳ್ಳುವುದಲ್ಲ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಕೂಡ ಆಗಿದೆ.