ಹಸಿರು ಮೆಣಸಿನಕಾಯಿಯನ್ನು ನಿತ್ಯದ ಆಹಾರದಲ್ಲಿ ಬಳಸುವುದರಿಂದ ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹಕ್ಕೆ ಸಿಗುವ 7 ಪ್ರಮುಖ ಆರೋಗ್ಯ ಲಾಭಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಹೃದಯಾಘಾತ ಕಡಿಮೆ
ಹಸಿರು ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು, ಹೃದಯಾಘಾತದಂತಹ ಅಪಾಯಗಳನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ವಿವಿಧ ರೀತಿಯ ಸೋಂಕು ಹಾಗೂ ಜ್ವರದಿಂದ ದೇಹವನ್ನು ರಕ್ಷಿಸುತ್ತದೆ.
ತೂಕ ಇಳಿಕೆಗೆ ಸಹಕಾರಿ
ಮೆಣಸಿನಕಾಯಿ ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದ್ದು, ತೂಕ ಇಳಿಕೆಗೆ ಪೂರಕವಾಗಿದೆ.
ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ
ಮಧುಮೇಹ ಇರುವವರಿಗೆ ಹಸಿರು ಮೆಣಸಿನಕಾಯಿ ಒಳ್ಳೆಯದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ.
ಜೀರ್ಣಕ್ರಿಯೆ ಸುಧಾರಣೆ
ಇದರಲ್ಲಿ ನಾರಿನಂಶ ಉತ್ತಮವಾಗಿದ್ದು, ಲಾಲಾರಸದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ನಾವು ತಿಂದ ಆಹಾರ ಸುಲಭವಾಗಿ ಜೀರ್ಣವಾಗಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.
ಉತ್ತಮ ಮೂಡ್ ಮತ್ತು ಒತ್ತಡ ನಿವಾರಣೆ
ಹಸಿರು ಮೆಣಸಿನಕಾಯಿಯನ್ನು ಸೇವಿಸಿದಾಗ ಮೆದುಳಿನಲ್ಲಿ 'ಎಂಡಾರ್ಫಿನ್' ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಮೂಡ್ ಅನ್ನು ಸುಧಾರಿಸಿ, ಮನಸ್ಸಿಗೆ ಸಂತೋಷ ನೀಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತ್ವಚೆ ಮತ್ತು ಕಣ್ಣಿನ ಆರೋಗ್ಯ
ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ವಿಟಮಿನ್ ಸಿ ಅಂಶವು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಿ, ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯುತ್ತದೆ.
ಗಮನಿಸಿ
ಹಸಿರು ಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉರಿ ಅಥವಾ ಅಸಿಡಿಟಿ ಉಂಟಾಗಬಹುದು, ಆದ್ದರಿಂದ ಮಿತವಾಗಿ ಬಳಸುವುದು ಸೂಕ್ತ.