5 ಬೃಹತ್ ದಾಖಲೆಗಳ ಮೇಲೆ ಭಾರತದ ಕಣ್ಣು!

ಮಣಿಕಂಠ ಪಾ ಹಿರೇಮಠ

5 ಬೃಹತ್ ದಾಖಲೆಗಳ ಮೇಲೆ ಭಾರತದ ಕಣ್ಣು!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಟಿ20 ವಿಶ್ವಕಪ್ ಮಹಾಸಮರ ನಡೆಯಲಿದ್ದು, ನ್ಯೂಜಿಲೆಂಡ್ ವಿರುದ್ಧ ಗೆದ್ದು ಐತಿಹಾಸಿಕ ಮೂರನೇ ಪ್ರಶಸ್ತಿ ಹಾಗೂ ಐದು ಅಪರೂಪದ ಬೃಹತ್ ದಾಖಲೆಗಳನ್ನು ತನ್ನದಾಗಿಸಿಕೊಳ್ಳಲು ಸೂರ್ಯಕುಮಾರ್ ನೇತೃತ್ವದ ಬಲಿಷ್ಠ ಟೀಮ್ ಇಂಡಿಯಾ ಸಂಪೂರ್ಣವಾಗಿ ಸಜ್ಜಾಗಿದೆ.

ಮೂರು ಬಾರಿ ಚಾಂಪಿಯನ್ ಆದ ಮೊದಲ ತಂಡ

ಭಾರತ ಈಗಾಗಲೇ 2007 ಮತ್ತು 2024ರಲ್ಲಿ ಪ್ರಶಸ್ತಿ ಗೆದ್ದಿದೆ. ಇಂದು ನ್ಯೂಜಿಲೆಂಡ್ ವಿರುದ್ಧ ಗೆದ್ದರೆ, ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡ ಎಂಬ ಇತಿಹಾಸ ಬರೆಯಲಿದೆ.

ಟೈಟಲ್ ಉಳಿಸಿಕೊಂಡ ಮೊದಲ ತಂಡ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಈವರೆಗೆ ಯಾವುದೇ ತಂಡ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿಲ್ಲ. 2024ರ ಚಾಂಪಿಯನ್ ಆಗಿರುವ ಭಾರತ ಇಂದು ಗೆದ್ದರೆ, ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡ ಮೊದಲ ತಂಡವಾಗಲಿದೆ.

ತವರಿನಲ್ಲಿ ಕಪ್ ಗೆದ್ದ ಮೊದಲ ಆತಿಥೇಯ!

ಈವರೆಗೆ ಟಿ20 ವಿಶ್ವಕಪ್ ಆಯೋಜಿಸಿದ ಯಾವುದೇ ದೇಶ ತನ್ನ ಸ್ವಂತ ಮಣ್ಣಿನಲ್ಲಿ ಕಪ್ ಗೆದ್ದಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಇಂದು ಗೆದ್ದರೆ, ತವರಿನಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಮೊದಲ ಆತಿಥೇಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನ್ಯೂಜಿಲೆಂಡ್ ವಿರುದ್ಧದ ಸೋಲಿನ ದಾಖಲೆ ಬ್ರೇಕ್!

ವಿಶ್ವಕಪ್ ವೇದಿಕೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವುದು ಭಾರತಕ್ಕೆ ಸವಾಲಿನ ಕೆಲಸ. ಈ ಹಿಂದೆ 2007, 2016 ಮತ್ತು 2021ರ ಟಿ20 ವಿಶ್ವಕಪ್‌ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಇಂದು ಗೆಲ್ಲುವ ಮೂಲಕ ಕಿವಿಗಳ ವಿರುದ್ಧ ಮೊದಲ ವಿಶ್ವಕಪ್ ಜಯ ದಾಖಲಿಸಲು ಸಜ್ಜಾಗಿದೆ.

ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ದಾಖಲೆ!

ಭಾರತ ಈಗಾಗಲೇ 4 ಬಾರಿ (2007, 2014, 2024, 2026) ಫೈನಲ್ ತಲುಪುವ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.