ಕಬ್ಬಿನ ಹಾಲು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಮಣಿಕಂಠ ಪಾ ಹಿರೇಮಠ

ಕಬ್ಬಿನ ಹಾಲು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಸಲು ಕಬ್ಬಿನ ಹಾಲು ಅತ್ಯುತ್ತಮ ಆಯ್ಕೆ. ಇದು ಕೇವಲ ಬಾಯಾರಿಕೆ ನೀಗಿಸುವುದಲ್ಲದೆ, ನಿರ್ಜಲೀಕರಣ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಿಸಿಲಿನಿಂದ ಉಂಟಾಗುವ ಆಯಾಸವನ್ನು ದೂರಮಾಡಿ, ತಕ್ಷಣದ ಚೈತನ್ಯ ನೀಡುವ ಈ ಪಾನೀಯದ ಇತರ ವಿಶೇಷ ಆರೋಗ್ಯ ರಹಸ್ಯಗಳನ್ನು ಈ ಕೆಳಗಿನಂತಿವೆ.

ಶಕ್ತಿ ವರ್ಧಕ

ಬೇಸಿಗೆಯ ಬಿಸಿಲಿನಲ್ಲಿ ದೇಹದ ಶಕ್ತಿ ಕುಂದಿದಾಗ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಸಾಕು. ಇದರಲ್ಲಿರುವ ಸುಕ್ರೋಸ್ ಅಂಶವು ದೇಹಕ್ಕೆ ತಕ್ಷಣದ ಚೈತನ್ಯವನ್ನು ನೀಡುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.

ಲಿವರ್​ ಆರೋಗ್ಯಕ್ಕೆ ರಾಮಬಾಣ

ಆಯುರ್ವೇದದ ಪ್ರಕಾರ, ಕಬ್ಬಿನ ಹಾಲು ಯಕೃತ್ತನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಾಮಾಲೆ ರೋಗಿಗಳಿಗೆ ಇದು ಅತ್ಯುತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ, ಏಕೆಂದರೆ ಇದು ಯಕೃತ್ತಿನಲ್ಲಿ ಉಂಟಾದ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಕಬ್ಬಿನ ಹಾಲಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಹೊಟ್ಟೆಯಲ್ಲಿನ pH ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಜೀರ್ಣಕಾರಿ ರಸಗಳ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ.

ರೋಗನಿರೋಧಕ ಶಕ್ತಿ ವೃದ್ಧಿ

ಇದು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಕೂಡಿದೆ. ನಿಯಮಿತವಾಗಿ ಕಬ್ಬಿನ ಹಾಲು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ವೈರಾಣು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.

ಹೊಳೆಯುವ ಚರ್ಮಕ್ಕಾಗಿ

ಕಬ್ಬಿನ ಹಾಲಿನಲ್ಲಿ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು ಮತ್ತು ಗ್ಲೈಕೋಲಿಕ್ ಆಮ್ಲಗಳಿವೆ. ಇದು ಚರ್ಮದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು, ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯಲು ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.