ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿವೆ ಪವರ್‌ಫುಲ್ ಟಿಪ್ಸ್!

ಭಾನುಪ್ರಿಯ ಡಿ.ಕೆ

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿವೆ ಪವರ್‌ಫುಲ್ ಟಿಪ್ಸ್!

ಮನೆಯಲ್ಲಿ ಹಲ್ಲಿಗಳ ಕಾಟವನ್ನು ತಡೆಯಲು ಮತ್ತು ಅವುಗಳನ್ನು ಸುರಕ್ಷಿತವಾಗಿ ಓಡಿಸಲು ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಸುಲಭವಾಗಿ ಓಡಿಸಬಹುದು.

ಈರುಳ್ಳಿ ಮತ್ತು ಬೆಳ್ಳುಳ್ಳಿ ರಸ

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ತೆಗೆಯಿರಿ. ಈ ರಸಕ್ಕೆ ಸ್ವಲ್ಪ ನೀರು ಬೆರೆಸಿ ಸ್ಪ್ರೇ ಬಾಟಲಿಗೆ ತುಂಬಿಸಿ. ಹಲ್ಲಿಗಳು ಹೆಚ್ಚಾಗಿ ಬರುವ ಕಿಟಕಿ, ಬಾಗಿಲು ಮತ್ತು ಮೂಲೆಗಳಿಗೆ ಇದನ್ನು ಸ್ಪ್ರೇ ಮಾಡಿದರೆ ಅದರ ವಾಸನೆಗೆ ಹಲ್ಲಿಗಳು ಓಡಿಹೋಗುತ್ತವೆ.

ಕಾಫಿ ಪುಡಿ ಮತ್ತು ತಂಬಾಕು ಉಂಡೆಗಳು

ಕಾಫಿ ಪುಡಿ ಮತ್ತು ತಂಬಾಕು ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸಣ್ಣ ಉಂಡೆಗಳನ್ನು ಮಾಡಿ. ಇವುಗಳನ್ನು ಹಲ್ಲಿಗಳು ಅಡಗಿರುವ ಜಾಗಗಳಲ್ಲಿ ಇರಿಸಿ. ಈ ಉಂಡೆಗಳ ವಾಸನೆ ಹಲ್ಲಿಗಳಿಗೆ ವಿಷಕಾರಿಯಾಗಿದ್ದು, ಅವು ಹತ್ತಿರ ಸುಳಿಯುವುದಿಲ್ಲ.

ಪೆಪ್ಪರ್​ ಸ್ಪ್ರೇ

ಒಂದು ಲೋಟ ನೀರಿಗೆ 2 ಚಮಚ ಕೆಂಪು ಮೆಣಸಿನ ಪುಡಿ ಅಥವಾ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಸ್ಪ್ರೇ ತಯಾರಿಸಿ. ಹಲ್ಲಿಗಳು ಕಾಣಿಸಿಕೊಳ್ಳುವ ಗೋಡೆ ಮತ್ತು ಮೂಲೆಗಳಿಗೆ ಇದನ್ನು ಸಿಂಪಡಿಸಿ. ಅವು ಆ ಜಾಗವನ್ನು ಬಿಟ್ಟು ಹೋಗುತ್ತವೆ.

ಖಾಲಿ ಮೊಟ್ಟೆಯ ಕವಚಗಳು

ಹಲ್ಲಿಗಳಿಗೆ ಮೊಟ್ಟೆಯ ವಾಸನೆ ಇಷ್ಟವಾಗುವುದಿಲ್ಲ ಮತ್ತು ಮೊಟ್ಟೆಯ ಕವಚಗಳನ್ನು ನೋಡಿದಾಗ ಅಲ್ಲಿ ದೊಡ್ಡ ಪ್ರಾಣಿ ಅಥವಾ ಪಕ್ಷಿ ಇದೆ ಎಂದು ಅವು ಹೆದರುತ್ತವೆ. ಕಿಟಕಿಗಳ ಬಳಿ ಅಥವಾ ಗೋಡೆಯ ಮೂಲೆಗಳಲ್ಲಿ ಖಾಲಿ ಮೊಟ್ಟೆಯ ಕವಚಗಳನ್ನು ಇಡುವುದರಿಂದ ಹಲ್ಲಿಗಳು ಬರುವುದಿಲ್ಲ.

ತಣ್ಣೀರು ಸಿಂಪಡಿಸುವುದು

ಹಲ್ಲಿಗಳು ತಣ್ಣಗಿನ ರಕ್ತದ ಪ್ರಾಣಿಗಳು ಹಾಗಾಗಿ ಅವುಗಳಿಗೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆಚ್ಚಗಿನ ವಾತಾವರಣ ಬೇಕು. ಹಲ್ಲಿ ಕಂಡಾಗ ಅದರ ಮೇಲೆ ತಣ್ಣೀರನ್ನು ಚಿಮುಕಿಸಿದರೆ, ಅದರ ದೇಹದ ಉಷ್ಣತೆ ಇದ್ದಕ್ಕಿದ್ದಂತೆ ಕಡಿಮೆಯಾಗಿ ಅದು ಚಲಿಸಲಾರದೆ ಸ್ತಬ್ಧವಾಗುತ್ತದೆ.