ಮಧುಮೇಹಿಗಳಿಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಸೂತ್ರಗಳು!

ಭಾನುಪ್ರಿಯ ಡಿ.ಕೆ

ಮಧುಮೇಹಿಗಳಿಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಸೂತ್ರಗಳು!

ಮಧುಮೇಹ ಕೇವಲ ರಕ್ತದ ಸಕ್ಕರೆ ಅಂಶದ ಮೇಲೆ ಮಾತ್ರವಲ್ಲದೆ, ಚರ್ಮದ ಮೇಲೂ ನೇರ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಚರ್ಮವು ಬೇಗನೆ ಒಣಗುವುದು, ತುರಿಕೆ ಮತ್ತು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ

ಮಧುಮೇಹಿಗಳಲ್ಲಿ ಚರ್ಮವು ಅತಿ ಬೇಗನೆ ಒಣಗುತ್ತದೆ. ಅದಕ್ಕಾಗಿ ಪ್ರತಿದಿನ ಸ್ನಾನದ ನಂತರ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಅಥವಾ ಲೋಶನ್ ಹಚ್ಚಿ. ಆದರೆ, ಕಾಲ್ಬೆರಳುಗಳ ಸಂದಿಯಲ್ಲಿ ಲೋಶನ್ ಹಚ್ಚಬೇಡಿ.

ಪಾದಗಳ ವಿಶೇಷ ಕಾಳಜಿ ವಹಿಸಿ

ಮಧುಮೇಹ ಇರುವವರಿಗೆ ಪಾದಗಳಲ್ಲಿನ ಸಣ್ಣ ಗಾಯಗಳೂ ದೊಡ್ಡ ಸಮಸ್ಯೆಯಾಗಬಹುದು. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆದು, ಯಾವುದೇ ಬಿರುಕು, ಕೆಂಪು ಕಲೆ ಅಥವಾ ಗಾಯಗಳಿವೆಯೇ ಎಂದು ಪರೀಕ್ಷಿಸಿ.

ಸೌಮ್ಯವಾದ ಸೋಪುಗಳನ್ನು ಬಳಸಿ

ಅತಿಯಾದ ರಾಸಾಯನಿಕವಿರುವ ಸೋಪುಗಳು ಚರ್ಮದ ನೈಸರ್ಗಿಕ ತೈಲವನ್ನು ಹೊರಹಾಕಿ ಚರ್ಮವನ್ನು ಮತ್ತಷ್ಟು ಒಣಗಿಸುತ್ತವೆ. ಹಾಗಾಗಿ ಸ್ನಾನಕ್ಕೆ ಅತಿಯಾದ ಬಿಸಿ ನೀರನ್ನು ಬಳಸಬೇಡಿ. ಆಯುರ್ವೇದ ಮೂಲದ ಸೋಪುಗಳನ್ನು ಬಳಸಿ.

ಸಾಕಷ್ಟು ನೀರು ಕುಡಿಯಿರಿ

ಒಳಗಿನಿಂದ ಚರ್ಮವನ್ನು ಆರೋಗ್ಯವಾಗಿಡಲು ನೀರಿನಂಶ ಬಹಳ ಮುಖ್ಯ. ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯಿರಿ. ಇದು ದೇಹದ ಕಲ್ಮಶಗಳನ್ನು ಹೊರಹಾಕಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಗಾಯಗಳನ್ನು ನಿರ್ಲಕ್ಷಿಸಬೇಡಿ

ಮಧುಮೇಹಿಗಳಲ್ಲಿ ಗಾಯಗಳು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಯಾವುದೇ ಸಣ್ಣ ಗಾಯವಾದರೂ ತಕ್ಷಣ ಆಂಟಿಸೆಪ್ಟಿಕ್ ದ್ರಾವಣದಿಂದ ಸ್ವಚ್ಛಗೊಳಿಸಿ ವೈದ್ಯರ ಸಲಹೆ ಪಡೆಯಿರಿ.