ಚಳಿಗಾಲದ ಮೈ ತುರಿಕೆಗೆ ಇಲ್ಲಿದೆ ಸುಲಭ ಮನೆಮದ್ದು

ಸವಿನಾ ನಾಯ್ಕ

ಚಳಿಗಾಲದ ಮೈ ತುರಿಕೆಗೆ ಇಲ್ಲಿದೆ ಸುಲಭ ಮನೆಮದ್ದು

ಚಳಿಗಾಲದಲ್ಲಿ ಗಾಳಿಯು ಶುಷ್ಕವಾಗಿರುವುದರಿಂದ ಚರ್ಮದ ತೇವಾಂಶ ಕಡಿಮೆಯಾಗಿ ತುರಿಕೆ ಕಾಣಿಸಿಕೊಳ್ಳುವುದು ಸಹಜ. ಇದನ್ನು 'ವಿಂಟರ್ ಇಚ್' (Winter Itch) ಎಂದು ಕರೆಯುತ್ತಾರೆ. ಇದಕ್ಕೆ ಮನೆಯಲ್ಲಿಯೇ ಮದ್ದು ಮಾಡಿಕೊಳ್ಳಬಹುದಾಗಿದೆ.

ತೆಂಗಿನ ಎಣ್ಣೆ

ಚಳಿಗಾಲದ ಚರ್ಮದ ಸಮಸ್ಯೆಗೆ ತೆಂಗಿನ ಎಣ್ಣೆ ಅತ್ಯುತ್ತಮ ಮದ್ದು. ಇದರಲ್ಲಿರುವ ಕೊಬ್ಬಿನಾಮ್ಲಗಳು ಚರ್ಮಕ್ಕೆ ತೇವಾಂಶ ನೀಡುತ್ತವೆ. ಸ್ನಾನ ಮಾಡಿದ ತಕ್ಷಣ ಚರ್ಮ ಸ್ವಲ್ಪ ಹಸಿಯಾಗಿರುವಾಗಲೇ ಇಡೀ ಮೈಗೆ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ. ಇದು ನೈಸರ್ಗಿಕ ಮೊಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ಬೇವಿನ ಎಲೆ

ಬೇವಿನಲ್ಲಿ ಆ್ಯಂಟಿ-ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ-ಫಂಗಲ್ ಗುಣಗಳಿವೆ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಆ ನೀರಿನಿಂದ ಸ್ನಾನ ಮಾಡಿ. ಅಥವಾ ಬೇವಿನ ಎಣ್ಣೆಯನ್ನು ತುರಿಕೆ ಇರುವ ಕಡೆ ಹಚ್ಚಿ.

ಹಾಲು

ಹಾಲು ಚರ್ಮಕ್ಕೆ ಮೃದುತ್ವ ನೀಡುವುದಲ್ಲದೆ ತುರಿಕೆಯನ್ನು ತಡೆಯುತ್ತದೆ. ಹತ್ತಿಯ ಉಂಡೆಯನ್ನು ಹಸಿ ಹಾಲಿನಲ್ಲಿ ಅದ್ದಿ ತುರಿಕೆ ಇರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಸ್ನಾನ ಮಾಡಿ.

ಲೋಳೆಸರ

ಲೋಳೆಸರವು ಚರ್ಮಕ್ಕೆ ತಂಪು ನೀಡುತ್ತದೆ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ತಾಜಾ ಲೋಳೆಸರದ ಜೆಲ್ ಅನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆದುಕೊಳ್ಳಿ.