ದೇಹದಲ್ಲಿ ಪ್ರೋಟೀನ್ ಕೊರತೆ ಸೂಚಿಸುವ ನಾಲ್ಕು ಲಕ್ಷಣಗಳು

ವಿನಾಯಕ ನಾಯಕ

ದೇಹದಲ್ಲಿ ಪ್ರೋಟೀನ್ ಕೊರತೆ ಸೂಚಿಸುವ ನಾಲ್ಕು ಲಕ್ಷಣಗಳು

ನಿಮ್ಮ ದೇಹದ ಸದ್ದಿಲ್ಲದ ಸಂಕೇತಗಳನ್ನು ನಿರ್ಲಕ್ಷಿಸಬೇಡಿ! ಸ್ನಾಯುಗಳ ದೌರ್ಬಲ್ಯ, ಉಗುರು ಹಾಗೂ ಕೂದಲಿನ ಸಮಸ್ಯೆ, ಪದೇ ಪದೇ ಹಸಿವಾಗುವುದು ಮತ್ತು ಕುಂದುತ್ತಿರುವ ರೋಗನಿರೋಧಕ ಶಕ್ತಿ ಇವು ಪ್ರೋಟೀನ್ ಕೊರತೆಯ ಪ್ರಮುಖ ಲಕ್ಷಣಗಳಾಗಿರಬಹುದು.

ಪದೇ ಪದೇ ಹಸಿವಾಗುವುದು

ಪ್ರೋಟೀನ್ ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ದೀರ್ಘಕಾಲ ನೀಡುತ್ತದೆ. ಒಂದು ವೇಳೆ ನೀವು ಊಟ ಮಾಡಿದ ಸ್ವಲ್ಪ ಸಮಯದಲ್ಲೇ ಮತ್ತೆ ಹಸಿವಾಗುತ್ತಿದ್ದರೆ ಅಥವಾ ಪದೇ ಪದೇ ಸಿಹಿ ಪದಾರ್ಥಗಳನ್ನು ತಿನ್ನಬೇಕೆಂದು ಅನಿಸುತ್ತಿದ್ದರೆ, ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆಯಿದೆ ಎಂದರ್ಥ. ಪ್ರೋಟೀನ್ ಸರಿಯಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ, ಇಲ್ಲದಿದ್ದರೆ ಹಸಿವು ಹೆಚ್ಚಾಗುತ್ತದೆ.

ಕೂದಲು ಉದುರುವುದು

ನಮ್ಮ ಕೂದಲು ಮತ್ತು ಉಗುರುಗಳು ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ದೇಹದಲ್ಲಿ ಪ್ರೋಟೀನ್ ಕಡಿಮೆಯಾದಾಗ, ದೇಹವು ಇರುವ ಅಲ್ಪಪ್ರಮಾಣದ ಪ್ರೋಟೀನ್ ಅನ್ನು ಸ್ನಾಯುಗಳ ರಕ್ಷಣೆಗೆ ಬಳಸಿಕೊಳ್ಳುತ್ತದೆ. ಇದರಿಂದಾಗಿ ಕೂದಲು ತೆಳುವಾಗುವುದು, ಅತಿಯಾಗಿ ಉದುರುವುದು ಮತ್ತು ಉಗುರುಗಳು ಬೇಗನೆ ಒಡೆಯುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸ್ನಾಯುಗಳ ದೌರ್ಬಲ್ಯ ಮತ್ತು ಕೀಲು ನೋವು

ದೇಹಕ್ಕೆ ಆಹಾರದ ಮೂಲಕ ಪ್ರೋಟೀನ್ ಸಿಗದಿದ್ದಾಗ, ದೇಹವು ತನ್ನಲ್ಲಿರುವ ಸ್ನಾಯುಗಳನ್ನೇ ಕರಗಿಸಿ ಶಕ್ತಿಯನ್ನು ಪಡೆಯಲು ಆರಂಭಿಸುತ್ತದೆ. ಇದರಿಂದಾಗಿ ಸ್ನಾಯುಗಳು ಸಡಿಲವಾಗುವುದು, ಕೈಕಾಲುಗಳಲ್ಲಿ ಶಕ್ತಿ ಇಲ್ಲದಂತಾಗುವುದು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಸಣ್ಣ ಕೆಲಸ ಮಾಡಿದರೂ ಬೇಗ ಸುಸ್ತಾಗುವುದು ಇದರ ಪ್ರಮುಖ ಸಂಕೇತವಾಗಿರುತ್ತದೆ.

ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು

ನಮ್ಮ ರೋಗನಿರೋಧಕ ಶಕ್ತಿ ಬಲವಾಗಿರಲು ಪ್ರೋಟೀನ್ ಅವಶ್ಯಕ. ದೇಹದಲ್ಲಿ ಆಂಟಿಬಾಡಿಗಳನ್ನು ತಯಾರಿಸಲು ಪ್ರೋಟೀನ್ ಬೇಕು. ಇದರ ಕೊರತೆಯಾದಾಗ ರೋಗನಿರೋಧಕ ಶಕ್ತಿ ಕುಂದುತ್ತದೆ, ಇದರಿಂದ ಪದೇ ಪದೇ ಶೀತ, ಕೆಮ್ಮು ಅಥವಾ ಸೋಂಕುಗಳು ಉಂಟಾಗುತ್ತವೆ. ಗಾಯಗಳಾದರೂ ಅವು ಬೇಗನೆ ಗುಣವಾಗುವುದಿಲ್ಲ.