ನಕಲಿ ಪನೀರ್​ನ್ನು ಮನೆಯಲ್ಲಿ ಪತ್ತೆಹಚ್ಚುವ ಐದು ವಿಧಾನಗಳು

ವಿನಾಯಕ ನಾಯಕ

ನಕಲಿ ಪನೀರ್​ನ್ನು ಮನೆಯಲ್ಲಿ ಪತ್ತೆಹಚ್ಚುವ ಐದು ವಿಧಾನಗಳು

ಮಾರುಕಟ್ಟೆಯಲ್ಲಿ ಸಿಗುವ ಪನೀರ್ ಅಸಲಿಯೇ ಅಥವಾ ನಕಲಿಯೇ ಎಂಬ ಸಂಶಯ ನಿಮಗಿದೆಯೇ? ಇತ್ತೀಚೆಗೆ ಲಾಭಕ್ಕಾಗಿ ಪನೀರ್‌ನಲ್ಲಿ ಪಿಷ್ಟ, ಡಿಟರ್ಜೆಂಟ್ ಮತ್ತು ಹಾನಿಕಾರಕ ಯೂರಿಯಾವನ್ನು ಬೆರೆಸಲಾಗುತ್ತಿದೆ. ಇಂತಹ ಕಲಬೆರಕೆ ಪನೀರ್ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಪನೀರ್ ವಿನ್ಯಾಸವನ್ನು ಪರೀಕ್ಷಿಸಿ

ನಿಜವಾದ ಪನೀರ್​ನ್ನು ನಿಮ್ಮ ಕೈಗಳಿಂದ ಒತ್ತಿದಾಗ ಅಥವಾ ಪುಡಿ ಮಾಡಿದಾಗ ಅದು ಸಣ್ಣ ಸಣ್ಣ ತುಂಡುಗಳಾಗಿ ಒಡೆಯುತ್ತದೆ. ಆದರೆ ನಕಲಿ ಪನೀರ್​ನ್ನು ಪುಡಿ ಮಾಡಲು ಹೋದರೆ ಅದು ರಬ್ಬರ್‌ನಂತೆ ಹಿಗ್ಗುತ್ತದೆ ಅಥವಾ ಜಿಗುಟಾದ ಹಿಟ್ಟಿನಂತಾಗುತ್ತದೆ.

ಕುದಿಯುವ ನೀರಿನ ಪರೀಕ್ಷೆ

ಪನೀರ್​ನ್ನು ಕುದಿಯುವ ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ಕುದಿಸಿ. ನಂತರ ಅದನ್ನು ತಣ್ಣಗಾಗಲು ಬಿಡಿ. ನಿಜವಾದ ಪನೀರ್ ಗಟ್ಟಿಯಾಗದೆ ಮೃದುವಾಗಿ ಉಳಿಯುತ್ತದೆ. ಆದರೆ ನಕಲಿ ಪನೀರ್ ನೀರಿನಲ್ಲಿ ಕರಗಲು ಶುರುಮಾಡಬಹುದು ಅಥವಾ ರಬ್ಬರ್‌ನಂತೆ ಗಟ್ಟಿಯಾಗಬಹುದು.

ಅಯೋಡಿನ್ ಪರೀಕ್ಷೆ

ಪನೀರ್‌ನಲ್ಲಿ ಪಿಷ್ಟ (Starch) ಇದೆಯೇ ಎಂದು ತಿಳಿಯಲು ಇದು ಅತ್ಯುತ್ತಮ ಮಾರ್ಗ. ಪನೀರ್​ನ್ನು ನೀರಿನಲ್ಲಿ ಕುದಿಸಿ.ಅದು ತಣ್ಣಗಾದ ನಂತರ ಅದರ ಮೇಲೆ ಒಂದೆರಡು ಹನಿ ಅಯೋಡಿನ್ ದ್ರಾವಣವನ್ನು ಹಾಕಿ. ಪನೀರ್ ನೀಲಿ ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ನಕಲಿ ಪಿಷ್ಟ ಅಥವಾ ಡಿಟರ್ಜೆಂಟ್ ಬೆರೆಸಲಾಗಿದೆ ಎಂದರ್ಥ.

ತೊಗರಿ ಬೇಳೆ ಪುಡಿ ಅಥವಾ ಸೋಯಾಬೀನ್ ಪುಡಿ ಪರೀಕ್ಷೆ

ಪನೀರ್​ನ್ನು ನೀರಿನಲ್ಲಿ ಹಾಕಿ ಕುದಿಸಿ. ಅದಕ್ಕೆ ಸ್ವಲ್ಪ ತೊಗರಿ ಬೇಳೆ ಪುಡಿ ಅಥವಾ ಸೋಯಾಬೀನ್ ಪುಡಿಯನ್ನು ಸೇರಿಸಿ 10 ನಿಮಿಷ ಬಿಡಿ. ಪನೀರ್ ಬಣ್ಣವು ನಿಧಾನವಾಗಿ ತಿಳಿ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದರೆ, ಆ ಪನೀರ್ ತಯಾರಿಸಲು ಯೂರಿಯಾ ಬಳಸಲಾಗಿದೆ ಎಂದು ತಿಳಿಯಬಹುದು.

ರುಚಿಯ ಮೂಲಕ ಪತ್ತೆಹಚ್ಚಿ

ನಿಜವಾದ ಪನೀರ್ ತಿನ್ನಲು ಹಾಲಿನಂತೆಯೇ ಮಧುರವಾದ ರುಚಿ ಹೊಂದಿರುತ್ತದೆ. ಆದರೆ ನಕಲಿ ಪನೀರ್​ನ್ನು ಅಗಿಯುವಾಗ ರಬ್ಬರ್ ತಿಂದ ಅನುಭವವಾಗುತ್ತದೆ ಮತ್ತು ಅದರಲ್ಲಿ ಹಾಲಿನ ಯಾವುದೇ ರುಚಿ ಇರುವುದಿಲ್ಲ. ಕೆಲವೊಮ್ಮೆ ಇದು ಹುಳಿ ಅಥವಾ ರಾಸಾಯನಿಕದ ರುಚಿಯನ್ನು ಹೊಂದಿರಬಹುದು.