ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿಸಿ ಕಾರಿನಲ್ಲಿ ಇಡಬೇಡಿ!

ಸವಿನಾ ನಾಯ್ಕ

ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿಸಿ ಕಾರಿನಲ್ಲಿ ಇಡಬೇಡಿ!

ಅನೇಕರು ಕಾರಿನಲ್ಲಿ ಪ್ರಯಾಣಿಸುವಾಗ ನೀರಿನ ಬಾಟಲಿಗಳನ್ನು ಇಟ್ಟು ಹೋಗುತ್ತಾರೆ. ನಂತರ ಬಿಸಿಲಿನಲ್ಲಿ ನಿಂತಿದ್ದ ಕಾರಿನೊಳಗೆ ಹತ್ತಿದಾಗ, ಅದೇ ಬಿಸಿಯಾದ ನೀರನ್ನು ಕುಡಿಯುತ್ತಾರೆ. ಆದರೆ ಈ ಅಭ್ಯಾಸ ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡಬಹುದು.

ಪ್ಲಾಸ್ಟಿಕ್‌ ರಾಸಾಯನಿಕಗಳು ನೀರಿನಲ್ಲಿ ಕರಗುತ್ತವೆ!

ಬಹುತೇಕ ನೀರಿನ ಬಾಟಲಿಗಳನ್ನು 'ಪಾಲಿಎಥಿಲಿನ್ ಟೆರೆಫ್ತಾಲೇಟ್' (PET) ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಕಾರು ಬಿಸಿಲಿನಲ್ಲಿ ನಿಂತಾಗ ಒಳಗಿನ ತಾಪಮಾನವು ಅತಿಯಾಗಿ ಹೆಚ್ಚಾಗುತ್ತದೆ. ಈ ಶಾಖಕ್ಕೆ ಪ್ಲಾಸ್ಟಿಕ್‌ನಲ್ಲಿರುವ ಬಿಸ್ಫೆನಾಲ್ ಎ (BPA) ಮತ್ತು ಆಂಟಿಮನಿ ಎಂಬ ರಾಸಾಯನಿಕಗಳು ನೀರಿನಲ್ಲಿ ಕರಗುತ್ತವೆ.

ಕ್ಯಾನ್ಸರ್ ಅಪಾಯ!

ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ಈ ರಾಸಾಯನಿಕಗಳು ದೇಹದಲ್ಲಿ ಸೇರಿದರೆ ದೀರ್ಘಕಾಲದ ನಂತರ ಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ.

ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ!

ಒಮ್ಮೆ ಬಾಟಲಿ ತೆರೆದು ನೀರು ಕುಡಿದರೆ, ನಿಮ್ಮ ಬಾಯಿಯಿಂದ ಬ್ಯಾಕ್ಟೀರಿಯಾಗಳು ಬಾಟಲಿಗೆ ಸೇರುತ್ತವೆ. ಕಾರಿನೊಳಗಿನ ಬೆಚ್ಚನೆಯ ವಾತಾವರಣವು ಈ ಬ್ಯಾಕ್ಟೀರಿಯಾಗಳು ಅತಿ ವೇಗವಾಗಿ ಬೆಳೆಯಲು ಪೂರಕವಾಗಿರುತ್ತವೆ.

ಹಾರ್ಮೋನ್ ಏರುಪೇರು!

ಈ ರಾಸಾಯನಿಕಗಳು ದೇಹದ ಅಂತಃಸ್ರಾವಕ ವ್ಯವಸ್ಥೆಯನ್ನು (Endocrine System) ಅಸ್ತವ್ಯಸ್ತಗೊಳಿಸುತ್ತವೆ. ಇದು ಹಾರ್ಮೋನ್ ಅಸಮತೋಲನ, ಮಧುಮೇಹ ಮತ್ತು ಬೊಜ್ಜು ಬರಲು ಕಾರಣವಾಗಬಹುದು.

ಸುರಕ್ಷಿತೆ ಅಗತ್ಯ!

1) ಕಾರನ್ನು ಪಾರ್ಕ್ ಮಾಡುವಾಗ ನೀರಿನ ಬಾಟಲಿಯನ್ನು ಒಳಗೆ ಬಿಡಬೇಡಿ. 2) ಒಂದು ವೇಳೆ ಪ್ಲಾಸ್ಟಿಕ್ ಬಾಟಲಿ ಇಡಲೇಬೇಕಾದ ಅನಿವಾರ್ಯತೆ ಇದ್ದರೆ, ನೇರ ಸೂರ್ಯನ ಬೆಳಕು ಬೀಳದಂತೆ ಇರಿಸಿ. 3) ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಅಥವಾ ತಾಮ್ರದ ಬಾಟಲಿಗಳನ್ನು ಬಳಸುವುದು ಉತ್ತಮ. ಇವು ಶಾಖಕ್ಕೆ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ