ಬಿಸಿಲಿಗೆ ಹೋದ ತಕ್ಷಣ ತಲೆ ಸುತ್ತುತ್ತಿದೆಯೇ? ಈ ಕಾರಣಗಳಿರಬಹುದು!
ಭಾನುಪ್ರಿಯ ಡಿ.ಕೆ
ಬಿಸಿಲಿಗೆ ಹೋದ ತಕ್ಷಣ ತಲೆ ಸುತ್ತುತ್ತಿದೆಯೇ? ಈ ಕಾರಣಗಳಿರಬಹುದು!
ಬೇಸಿಗೆಯ ತೀವ್ರ ಬಿಸಿಲಿಗೆ ಮೈಯೊಡ್ಡಿದ ತಕ್ಷಣ ತಲೆ ಸುತ್ತುವುದು ಅಥವಾ ಕಣ್ಣು ಕತ್ತಲೆ ಬರುವುದು ಅನೇಕರನ್ನು ಕಾಡುವ ಸಮಸ್ಯೆ. ಇದಕ್ಕೆ ಕೇವಲ ಬಿಸಿಲು ಮಾತ್ರವಲ್ಲ, ನಮ್ಮ ದೇಹದ ಒಳಗಿನ ಕೆಲವು ಬದಲಾವಣೆಗಳು ಕೂಡ ಕಾರಣವಾಗಿರುತ್ತವೆ.
ನಿರ್ಜಲೀಕರಣ
ಬಿಸಿಲಿನಲ್ಲಿ ಓಡಾಡುವಾಗ ಬೆವರಿನ ಮೂಲಕ ದೇಹದ ನೀರಿನಾಂಶ ಅತಿಯಾಗಿ ಹೊರಹೋಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರಕ್ತದ ಒತ್ತಡ ಇಳಿಕೆಯಾಗುತ್ತದೆ. ಇದರಿಂದ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಲನವಾಗದೆ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ.
ಹೀಟ್ ಎಕ್ಸಾಶನ್
ಅತಿಯಾದ ಶಾಖಕ್ಕೆ ದೇಹವು ದೀರ್ಘಕಾಲ ಒಡ್ಡಿಕೊಂಡಾಗ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆ ಏರುಪೇರಾಗುತ್ತದೆ. ಇದರಿಂದ ತಲೆ ಸುತ್ತು, ಅತಿಯಾದ ಬೆವರು, ವಾಕರಿಕೆ ಮತ್ತು ಸುಸ್ತು ಉಂಟಾಗುತ್ತದೆ. ಇದು 'ಹೀಟ್ ಸ್ಟ್ರೋಕ್'ನ ಆರಂಭಿಕ ಲಕ್ಷಣವೂ ಇರಬಹುದು.
ರಕ್ತದೊತ್ತಡದಲ್ಲಿ ಏರುಪೇರು
ಬಿಸಿಲಿಗೆ ಹೋದಾಗ ದೇಹವನ್ನು ತಂಪಾಗಿಸಲು ರಕ್ತನಾಳಗಳು ಹಿಗ್ಗುತ್ತವೆ. ಈ ಪ್ರಕ್ರಿಯೆಯಿಂದಾಗಿ ರಕ್ತದೊತ್ತಡ ದಿಢೀರನೆ ಕುಸಿಯಬಹುದು. ಆಗ ಮೆದುಳಿಗೆ ಆಮ್ಲಜನಕದ ಪೂರೈಕೆ ತಾತ್ಕಾಲಿಕವಾಗಿ ಕಡಿಮೆಯಾಗಿ ತಲೆ ಸುತ್ತು ಬರುತ್ತದೆ.
ಲವಣಾಂಶಗಳ ಕೊರತೆ
ಬೆವರಿನ ಜೊತೆಗೆ ಕೇವಲ ನೀರು ಮಾತ್ರವಲ್ಲದೆ ಸೋಡಿಯಂ ಮತ್ತು ಪೊಟ್ಯಾಸಿಯಂನಂತಹ ಪ್ರಮುಖ ಲವಣಾಂಶಗಳು ದೇಹದಿಂದ ಹೊರಹೋಗುತ್ತವೆ. ಈ ಎಲೆಕ್ಟ್ರೋಲೈಟ್‌ಗಳ ಸಮತೋಲನ ತಪ್ಪಿದಾಗ ನರಮಂಡಲದ ಮೇಲೆ ಪರಿಣಾಮ ಬೀರಲಿದ್ದು, ತಲೆ ತಿರುಗುವಿಕೆ ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ.
ಖಾಲಿ ಹೊಟ್ಟೆ ಅಥವಾ ಲೋ ಶುಗರ್
ಹೆಚ್ಚಿನ ಶಾಖವು ದೇಹದ ಮೆಟಬಾಲಿಸಂ ವೇಗವನ್ನು ಹೆಚ್ಚಿಸುತ್ತದೆ. ನೀವು ಸರಿಯಾಗಿ ಆಹಾರ ಸೇವಿಸದೆ ಬಿಸಿಲಿಗೆ ಹೋದರೆ, ದೇಹದಲ್ಲಿನ ಸಕ್ಕರೆ ಅಂಶ ದಿಢೀರನೆ ಕುಸಿದು ತಲೆ ಸುತ್ತು ಮತ್ತು ದಣಿವು ಕಾಣಿಸಿಕೊಳ್ಳಬಹುದು.