ಹೊಟ್ಟೆ ಬೊಜ್ಜು ಕರಗಿಸಲು ಈ 5 ಯೋಗಾಸನವನ್ನು ಮಾಡಿರಿ

ವಿನಾಯಕ ನಾಯಕ

ಹೊಟ್ಟೆ ಬೊಜ್ಜು ಕರಗಿಸಲು ಈ 5 ಯೋಗಾಸನವನ್ನು ಮಾಡಿರಿ

ಹೊಟ್ಟೆಯ ಬೊಜ್ಜು ಕರಗಿಸಿ ಫಿಟ್ ಆಗಲು ಯೋಗ ಅತ್ಯಂತ ಪ್ರಭಾವಶಾಲಿ ಮಾರ್ಗವಾಗಿದೆ. ಇಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಿ, ಸ್ನಾಯುಗಳನ್ನು ಬಲಪಡಿಸುವ ಪರಿಣಾಮಕಾರಿ 5 ಯೋಗಾಸನಗಳನ್ನು ಅವುಗಳನ್ನು ಮಾಡುವ ಸರಳ ವಿಧಾನದೊಂದಿಗೆ ನಿಮಗಾಗಿ ನೀಡಲಾಗಿದೆ.

ಭುಜಂಗಾಸನ (Cobra Pose)

ಈ ಆಸನವು ಹೊಟ್ಟೆಯ ಸ್ನಾಯುಗಳನ್ನು ಚೆನ್ನಾಗಿ ಹಿಗ್ಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಾಡುವ ವಿಧಾನ: 1. ನೆಲದ ಮೇಲೆ ಬೋರಲಾಗಿ ಮಲಗಿ. 2. ಎರಡು ಅಂಗೈಗಳನ್ನು ಎದೆಯ ಪಕ್ಕದಲ್ಲಿ ನೆಲದ ಮೇಲಿಡಿ. 3. ಈಗ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ಎದೆ ಮತ್ತು ತಲೆಯನ್ನು ಹಾವಿನ ಹೆಡೆಯಂತೆ ಮೇಲಕ್ಕೆ ಎತ್ತಿ. 4. ಮುಖ ಆಕಾಶದ ಕಡೆಗಿರಲಿ. 15-30 ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿದ್ದು, ಉಸಿರು ಬಿಡುತ್ತಾ ಯಥಾಸ್ಥಿತಿಗೆ ಬನ್ನಿ.

ನೌಕಾಸನ (Boat Pose)

ಹೊಟ್ಟೆಯ ಬೊಜ್ಜನ್ನು ಕರಗಿಸಲು ಇದು ಅತ್ಯುತ್ತಮ ಆಸನ. ಇದು ಇಡೀ ದೇಹದ ತೂಕವನ್ನು ಹೊಟ್ಟೆಯ ಸ್ನಾಯುಗಳ ಮೇಲೆ ಸಮತೋಲನಗೊಳಿಸುತ್ತದೆ. ಮಾಡುವ ವಿಧಾನ: 1.ನೆಲದ ಮೇಲೆ ನೇರವಾಗಿ ಮಲಗಿ, ಕೈಗಳು ಪಕ್ಕದಲ್ಲಿರಲಿ. 2.ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ಕಾಲುಗಳು, ಎದೆ ಮತ್ತು ತಲೆಯನ್ನು ನೆಲದಿಂದ ಮೇಲಕ್ಕೆ ಎತ್ತಿ. 3.ನಿಮ್ಮ ಕೈಗಳನ್ನು ಕಾಲುಗಳಿಗೆ ನೇರವಾಗಿ ಚಾಚಿ. ಈಗ ನಿಮ್ಮ ದೇಹವು 'V' ಆಕಾರದಲ್ಲಿರಬೇಕು. 4.ನಿಮ್ಮ ಸಂಪೂರ್ಣ ತೂಕ ಹೊಟ್ಟೆಯ ಮೇಲಿರಲಿ. 15 ಸೆಕೆಂಡುಗಳ ಕಾಲ ಉಸಿರನ್ನು ಸಾಮಾನ್ಯ ಸ್ಥಿತಿಯಲ್ಲಿಟ್ಟುಕೊಂಡು, ನಂತರ ನಿಧಾನವಾಗಿ ಕೆಳಗೆ ಬನ್ನಿ.

ಧನುರಾಸನ (Bow Pose)

ಈ ಆಸನದಲ್ಲಿ ದೇಹವು ಬಿಲ್ಲು ಆಕಾರವನ್ನು ಪಡೆಯುತ್ತದೆ. ಇದು ಹೊಟ್ಟೆಯ ಭಾಗಕ್ಕೆ ಉತ್ತಮ ಮಸಾಜ್ ನೀಡುತ್ತದೆ ಮತ್ತು ಕೊಬ್ಬನ್ನು ಕರಗಿಸುತ್ತದೆ. ಮಾಡುವ ವಿಧಾನ: 1.ಹೊಟ್ಟೆ ಕೆಳಗಿರುವಂತೆ ಬೋರಲಾಗಿ ಮಲಗಿ. 2.ಮೊಣಕಾಲುಗಳನ್ನು ಮಡಚಿ, ಎರಡು ಕೈಗಳಿಂದ ನಿಮ್ಮ ಎರಡೂ ಕಾಲಿನ ಹಿಮ್ಮಡಿಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. 3.ಈಗ ಉಸಿರನ್ನು ತೆಗೆದುಕೊಳ್ಳುತ್ತಾ ಎದೆ ಮತ್ತು ತೊಡೆಗಳನ್ನು ನೆಲದಿಂದ ಮೇಲಕ್ಕೆ ಎತ್ತಿ. 4.ದೇಹವನ್ನು ಬಿಲ್ಲು ಆಕಾರಕ್ಕೆ ತನ್ನಿ. 20 ಸೆಕೆಂಡುಗಳ ಕಾಲ ಈ ಸ್ಥಿತಿಯಲ್ಲಿದ್ದು ಉಸಿರು ಬಿಡುತ್ತಾ ವಿಶ್ರಮಿಸಿ.

ಕುಂಭಕಾಸನ / ಪ್ಲ್ಯಾಂಕ್ (Plank Pose)

ಇದು ಇಡೀ ದೇಹದ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಹೊಟ್ಟೆಯ ಬೊಜ್ಜನ್ನು ಗಣನೀಯವಾಗಿ ಕಡಿಮೆ ಮಾಡುವ ಆಸನವಾಗಿದೆ. ಮಾಡುವ ವಿಧಾನ: 1.ಮುಖ ಕೆಳಗ ಮಾಡಿ ಮಲಗಿ, ನಂತರ ಇಡೀ ದೇಹದ ತೂಕವನ್ನು ಕೈಗಳ ಅಂಗೈ ಮತ್ತು ಕಾಲಿನ ಬೆರಳುಗಳ ಮೇಲೆ ಸಮತೋಲನಗೊಳಿಸಿ ಮೇಲಕ್ಕೆ ಏಳಿ. 2.ನಿಮ್ಮ ಬೆನ್ನು, ಪೃಷ್ಠ ಮತ್ತು ಕುತ್ತಿಗೆ ಒಂದೇ ನೇರ ರೇಖೆಯಲ್ಲರಲಿ (ಪ್ಲ್ಯಾಂಕ್ ಸ್ಥಿತಿ). 3.ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ. 4.ಕನಿಷ್ಠ 30 ಸೆಕೆಂಡುಗಳಿಂದ 1 ನಿಮಿಷದವರೆಗೆ ಇದೇ ಸ್ಥಿತಿಯಲ್ಲಿರಿ.

ಪವನಮುಕ್ತಾಸನ(Wind Relieving Pose)

ಇದು ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯನ್ನು ನಿವಾರಿಸುವುದಲ್ಲದೆ, ಹೊಟ್ಟೆಯ ಕೆಳಭಾಗದ ಕೊಬ್ಬನ್ನು ಕರಗಿಸಲು ತುಂಬಾ ಸಹಕಾರಿ. ಮಾಡುವ ವಿಧಾನ: 1.ನೆಲದ ಮೇಲೆ ಬೆನ್ನಿಟ್ಟು ನೇರವಾಗಿ ಮಲಗಿ. 2.ಉಸಿರನ್ನು ಬಿಡುತ್ತಾ ಎರಡೂ ಮೊಣಕಾಲುಗಳನ್ನು ಮಡಚಿ ಎದೆಯ ಹತ್ತಿರ ತನ್ನಿ. 3.ಎರಡೂ ಕೈಗಳಿಂದ ಮೊಣಕಾಲುಗಳನ್ನು ಲಾಕ್ ಮಾಡಿ ಗಟ್ಟಿಯಾಗಿ ಹಿಡಿದುಕೊಳ್ಳಿ. 4.ಈಗ ತಲೆಯನ್ನು ಮೇಲಕ್ಕೆ ಎತ್ತಿ, ನಿಮ್ಮ ಗಲ್ಲ ಅಥವಾ ಮೂಗನ್ನು ಮೊಣಕಾಲಿಗೆ ಮುಟ್ಟಿಸಲು ಪ್ರಯತ್ನಿಸಿ. 20-30 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಂಡು ನಂತರ ಯಥಾಸ್ಥಿತಿಗೆ ಬನ್ನಿ.