ಒತ್ತಡ (Stress) ದಿಂದ ಪಾರಾಗಲು ಈ 5 ಪ್ರಾಣಾಯಾಮ ಮಾಡಿರಿ

ವಿನಾಯಕ ನಾಯಕ

ಒತ್ತಡ (Stress) ದಿಂದ ಪಾರಾಗಲು ಈ 5 ಪ್ರಾಣಾಯಾಮ ಮಾಡಿರಿ

ಒತ್ತಡ ಮುಕ್ತ ಜೀವನಕ್ಕೆ ಪ್ರಾಣಾಯಾಮ ಸರಳ ಹಾಗೂ ಅದ್ಭುತ ಮಾರ್ಗ. ಇಂದಿನ ಧಾವಂತದ ಬದುಕಿನಲ್ಲಿ ಕಾಡುವ ಅತಿಯಾದ ಆಲೋಚನೆ, ಆತಂಕ ಮತ್ತು ಮಾನಸಿಕ ಸುಸ್ತನ್ನು ನಿಯಂತ್ರಿಸಲು ಪ್ರಾಣಾಯಾಮ ರಾಮಬಾಣವಾಗಿದೆ.

ನಾಡಿ ಶೋಧನ ಪ್ರಾಣಾಯಾಮ (ಅನುಲೋಮ ವಿಲೋಮ)

ಇದು ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಆತಂಕವನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಮಾಡುವ ವಿಧಾನ: ಸುಖಾಸನದಲ್ಲಿ ಕುಳಿತುಕೊಳ್ಳಿ. ಬಲಗೈ ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ, ಎಡ ಹೊಳ್ಳೆಯಿಂದ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಈಗ ಉಂಗುರದ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ, ಬಲ ಹೊಳ್ಳೆಯ ಮೂಲಕ ಉಸಿರನ್ನು ಪೂರ್ತಿಯಾಗಿ ಹೊರಬಿಡಿ.

ಭ್ರಮರಿ ಪ್ರಾಣಾಯಾಮ (ಜೇನಿನ ನಾದ)

ಕೋಪ, ಒತ್ತಡ ಮತ್ತು ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ಇದು ಅತ್ಯುತ್ತಮ ಪ್ರಾಣಾಯಾಮವಾಗಿದೆ. ಇದು ಮಿದುಳಿನ ನರಗಳನ್ನು ಶಾಂತಗೊಳಿಸುತ್ತದೆ. ಮಾಡುವ ವಿಧಾನ: ಕಣ್ಣುಗಳನ್ನು ಮುಚ್ಚಿ ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಎರಡು ಹೆಬ್ಬೆರಳುಗಳಿಂದ ಕಿವಿಗಳನ್ನು ಮುಚ್ಚಿ. ತೋರುಬೆರಳುಗಳನ್ನು ಹಣೆಯ ಮೇಲೆಯೂ, ಉಳಿದ ಬೆರಳುಗಳನ್ನು ಕಣ್ಣುಗಳ ಮೇಲೆಯೂ ಹಗುರವಾಗಿ ಇರಿಸಿ ಮೂಗಿನ ಮೂಲಕ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ.

ಶೀತಲಿ ಪ್ರಾಣಾಯಾಮ

ಇದು ದೇಹ ಮತ್ತು ಮನಸ್ಸನ್ನು ತಕ್ಷಣವೇ ತಂಪುಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಮಾನಸಿಕ ಉದ್ವೇಗವನ್ನು ಕಡಿಮೆ ಮಾಡಲು ಇದು ಸಹಕಾರಿ. ಮಾಡುವ ವಿಧಾನ: ಆರಾಮವಾಗಿ ಕುಳಿತುಕೊಂಡು ನಾಲಿಗೆಯನ್ನು ಹೊರಚಾಚಿ, ಅದನ್ನು ಕೊಳವೆಯಂತೆ ಸುರುಳಿ ಸುತ್ತಿ.ಈ ನಾಲಿಗೆಯ ಕೊಳವೆಯ ಮೂಲಕ ನಿಧಾನವಾಗಿ ಗಾಳಿಯನ್ನು ಒಳಗೆ ಎಳೆದುಕೊಳ್ಳಿ. ಆಗ ನಿಮಗೆ ಗಂಟಲಿನಲ್ಲಿ ತಂಪು ಅನುಭವವಾಗುತ್ತದೆ.

ಕಪಾಲಭಾತಿ ಪ್ರಾಣಾಯಾಮ

ಇದು ದೇಹದಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಮತ್ತು ಹಾರ್ಮೋನ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಮಾಡುವ ವಿಧಾನ: ನೇರವಾಗಿ ಕುಳಿತು ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಉಸಿರನ್ನು ಹೊರಬಿಡುವಾಗ ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳುತ್ತಾ, ಜೋರಾಗಿ ಮತ್ತು ವೇಗವಾಗಿ ಮೂಗಿನಿಂದ ಉಸಿರನ್ನು ಹೊರಹಾಕಬೇಕು.

ಉದ್ಗೀತ್ ಪ್ರಾಣಾಯಾಮ (ಓಂಕಾರ ಜಪ)

ಇದು ಮನಸ್ಸಿಗೆ ಆಳವಾದ ಶಾಂತಿ ಮತ್ತು ಏಕಾಗ್ರತೆಯನ್ನು ನೀಡುತ್ತದೆ. ಡಿಪ್ರೆಶನ್ ಅಥವಾ ಅತಿಯಾದ ಆಲೋಚನೆಗಳಿಂದ ಬಳಲುತ್ತಿರುವವರಿಗೆ ಇದು ರಾಮಬಾಣ. ಮಾಡುವ ವಿಧಾನ: ಕಣ್ಣುಗಳನ್ನು ಮುಚ್ಚಿ, ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ. ಮೂಗಿನ ಮೂಲಕ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಉಸಿರನ್ನು ಹೊರಬಿಡುವಾಗ ಅತ್ಯಂತ ಲಯಬದ್ಧವಾಗಿ ಮತ್ತು ದೀರ್ಘವಾಗಿ ಓಂ ಎಂದು ಉಚ್ಚರಿಸುತ್ತಾ ಉಸಿರನ್ನು ಬಿಡಿ.