ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ? ಸಕಲವನ್ನು ಅನುಭವಿಸಲು ಆರೋಗ್ಯವೇ ಬಹುಮುಖ್ಯ ಅಲ್ವೇ. ವೈದ್ಯರ ಬಳಿ ಹೋಗದೆ ತಿಳಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ನಾಲಿಗೆಯ ಬಣ್ಣವೇ ಹೇಳುತ್ತೆ
ನಿಮ್ಮ ನಾಲಿಗೆಯ ಬಣ್ಣ ನೀವು ಎಷ್ಟು ಆರೋಗ್ಯಕರ ಎಂದು ಹೇಳುತ್ತದೆ. ಹೀಗಾಗಿಯೇ, ನಾವು ವೈದ್ಯರ ಬಳಿ ಹೋದಾಗ ಅವರು ಮೊದಲಿಗೆ ನಮ್ಮ ನಾಲಿಗೆಯನ್ನು ಪರಿಶೀಲಿಸುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಬಹುದು.
ನಾಲಿಗೆಯು ಗುಲಾಬಿ ಬಣ್ಣ
ಆರೋಗ್ಯಕರ ನಾಲಿಗೆಯು ಗುಲಾಬಿ ಬಣ್ಣದಲ್ಲಿರುತ್ತದೆ. ಆದರೆ, ಕೆಲವೊಮ್ಮೆ ಒಂದಷ್ಟು ಕಾರಣಗಳಿಂದ ಬಣ್ಣ ಬದಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ನಾಲಿಗೆ ಸದಾ ಮಸುಕಾದ ಗುಲಾಬಿ ಬಣ್ಣದಲ್ಲಿರುತ್ತದೆ ಮತ್ತು ಅದರ ಮೇಲೆ ಬಿಳಿ ಪದರವಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.
ನೀಲಿ ಬಣ್ಣ
ನಾಲಿಗೆ ನೀಲಿ ಬಣ್ಣದಲ್ಲಿದ್ದರೆ, ಹೃದಯ ಸಂಬಂಧಿ ಸಮಸ್ಯೆಗಳ ಸೂಚನೆಯಾಗಿದೆ. ಹೃದಯವು ಆರೋಗ್ಯಕರವಾಗಿಲ್ಲದಿದ್ದರೆ, ರಕ್ತದಲ್ಲಿನ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುತ್ತದೆ.
ಅಲ್ಲಲ್ಲಿ ಕಪ್ಪು ಬಣ್ಣ
ನಿಮ್ಮ ನಾಲಿಗೆ ಬಣ್ಣ ಕಪ್ಪಾದರೆ, ಖಂಡಿತಾ ಅಪಾಯ ಎಂದೇ ತಿಳಿಯಿರಿ. ಶಿಲೀಂಧ್ರಗಳ ಸೋಂಕಿನಿಂದ ಹುಣ್ಣುಗಳು ಉಂಟಾಗಬಹುದು. ಇಲ್ಲದಿದ್ದರೆ, ಅಪಾಯಕಾರಿ ಕ್ಯಾನ್ಸರ್ನಂತಹ ಸಮಸ್ಯೆಗಳಿಂದ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಬಹುದು.
ಹಳದಿ ಬಣ್ಣ
ಇದು ಸಾಮಾನ್ಯವಾಗಿ ಕಾಡುವಂತದ್ದು. ನಾಲಿಗೆ ಬಣ್ಣ ಹಳದಿಯಾಗಿದ್ದರೆ ವಿಟಮಿನ್ ಕೊರತೆ ಇದೆ ಎಂದರ್ಥ. ಅಜೀರ್ಣ ಸಮಸ್ಯೆಗಳಿಂದ ನಾಲಿಗೆ ಹಳದಿ ಬಣ್ಣಕ್ಕೆ ತಿರುಗಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಯಕೃತ್ತಿನ ಸಮಸ್ಯೆಗಳಿದ್ದರೂ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಬಿಳಿ ಬಣ್ಣ
ನಿಮ್ಮ ನಾಲಿಗೆ ಪೂರ್ತಿಯಾಗಿ ಬೆಳ್ಳಗಿದ್ದರೆ ನಿರ್ಜಲೀಕರಣದ ಸಮಸ್ಯೆ ಇದೆ ಎಂದರ್ಥ. ಅಲ್ಲದೆ, ಧೂಮಪಾನದ ಕಾರಣದಿಂದ ನಾಲಿಗೆ ಬಿಳಿಯಾಗಬಹುದು. ನಾಲಿಗೆ ಬೆಳ್ಳಗಿದ್ದರೆ ಹೆಚ್ಚು ನೀರು ಕುಡಿಯುವುದು ಸೂಕ್ತ.