ಆರೋಗ್ಯಕರ ಕಿಡ್ನಿಗಳಿಗಾಗಿ ಈ ಐದು ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ಭಾನುಪ್ರಿಯ ಡಿ.ಕೆ

ಆರೋಗ್ಯಕರ ಕಿಡ್ನಿಗಳಿಗಾಗಿ ಈ ಐದು ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವಲ್ಲಿ ಕಿಡ್ನಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿ ಅತ್ಯಗತ್ಯ. ನಿಯಮಿತವಾಗಿ ನೀರು ಕುಡಿಯುವುದು, ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಸೇವಿಸುವುದು, ಪ್ರತಿದಿನ ವ್ಯಾಯಾಮ ಇವು ಕಿಡ್ನಿಗಳನ್ನು ದೀರ್ಘಕಾಲದವರೆಗೆ ಸದೃಢವಾಗಿಡಲು ಸಹಾಯ ಮಾಡುತ್ತದೆ.

ಸಾಕಷ್ಟು ನೀರು ಕುಡಿಯುವುದು

ನೀರು ಕಿಡ್ನಿಯ ಕ್ಲೀನಿಂಗ್ ಏಜೆಂಟಾಗಿದೆ. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯಿರಿ. ಮೂತ್ರದ ಬಣ್ಣ ತಿಳಿಯಾದ ಹಳದಿ ಬಣ್ಣದಲ್ಲಿದ್ದರೆ ನಿಮ್ಮ ದೇಹದಲ್ಲಿ ನೀರಿನ ಅಂಶ ಸರಿಯಾಗಿದೆ ಎಂದರ್ಥ.

ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ

ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದು ಕಿಡ್ನಿಯ ಪ್ರಮುಖ ಶತ್ರು. ಉಪ್ಪು ಹೆಚ್ಚಾದಷ್ಟೂ ಕಿಡ್ನಿ ರಕ್ತವನ್ನು ಶುದ್ಧೀಕರಿಸಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಪ್ಯಾಕ್ ಮಾಡಿದ ಆಹಾರ, ಚಿಪ್ಸ್, ಉಪ್ಪಿನಕಾಯಿ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ.

ಸಕ್ಕರೆ ಮತ್ತು ತೂಕದ ಮೇಲೆ ನಿಯಂತ್ರಣ

ಮಧುಮೇಹ ಮತ್ತು ಅಧಿಕ ತೂಕ ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಕಿಡ್ನಿಯ ಸೂಕ್ಷ್ಮ ನಾಳಗಳು ಹಾನಿಗೊಳಗಾಗುತ್ತವೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು ಅಥವಾ ವ್ಯಾಯಾಮ ಮಾಡುವುದು ದೇಹದ ತೂಕವನ್ನು ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ನೋವು ನಿವಾರಕಗಳ ಬಗ್ಗೆ ಎಚ್ಚರ

ತಲೆನೋವು ಅಥವಾ ಮೈಕೈ ನೋವಿಗೆ ಪದೇ ಪದೇ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಕಿಡ್ನಿಗೆ ಮಾರಕವಾಗಬಹುದು. ಇವು ಕಿಡ್ನಿಯ ರಕ್ತ ಪರಿಚಲನೆಯನ್ನು ಕಡಿಮೆ ಮಾಡಿ ಹಾನಿ ಉಂಟುಮಾಡುತ್ತವೆ.

ತಾಜಾ ಆಹಾರ ಸೇವನೆ

ಸಂಸ್ಕರಿಸಿದ ಆಹಾರಗಳಿಗಿಂತ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಕಿಡ್ನಿಗೆ ಹೆಚ್ಚು ಒಳ್ಳೆಯದು. ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ರಂಜಕ ಸಮತೋಲನದಲ್ಲಿರುವ ಆಹಾರವನ್ನು ಸೇವಿಸಿ.