ಚಂದನವನದ ಶ್ವೇತಾ

ಭಾನುಪ್ರಿಯ ಡಿ.ಕೆ

ಚಂದನವನದ ಶ್ವೇತಾ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಅವರು 2003ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಸುಮತಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಕಾದಂಬರಿ, ಸುಕನ್ಯಾ ಮತ್ತು ಅರುಂಧತಿ ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ಕನ್ನಡಿಗರ ಮನೆಮಾತಾದರು.

ಸಿನಿಮಾಗಳಲ್ಲೂ ನಟನೆ

ಕಿರುತೆರೆಯ ಜೊತೆಗೆ ಶ್ವೇತಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ವರ್ಷ, ತಂಗಿಗಾಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು, ಶಿವರಾಜ್‌ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿನ ಪಾರಿ ಪಾತ್ರದ ಮೂಲಕ ಗಮನ ಸೆಳೆದರು.

ರಿಯಾಲಿಟಿ ಶೋ

ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಶ್ವೇತಾ ನಾಲ್ಕನೇ ಸ್ಥಾನ ಪಡೆದರು. ಡಾನ್ಸಿಂಗ್ ಸ್ಟಾರ್ ಮತ್ತು ಮಜಾ ಟಾಕೀಸ್​ನಂತಹ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಜಾ ಟಾಕೀಸ್​ನ ರಾಣಿ ಪಾತ್ರ ವಿಶೇಷ ಜನಪ್ರಿಯತೆ ಪಡೆದಿತ್ತು.

ನಿರೂಪಕಿಯಾಗಿ ಯಶಸ್ಸು

ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರ, ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್, ಜೋಡಿ ನಂಬರ್ 1, ಸೂಪರ್ ಕ್ವೀನ್ ಹಾಗೂ ಚೋಟಾ ಚಾಂಪಿಯನ್ ಕಾರ್ಯಕ್ರಮಗಳನ್ನು ನಿರೂಪಿಸಿ ಮೆಚ್ಚುಗೆ ಗಳಿಸಿದ್ದಾರೆ.

ಪ್ರಶಸ್ತಿಗಳ ಗೌರವ

ಅರುಂಧತಿ ಧಾರಾವಾಹಿಯ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಗೌರವ ಪಡೆದಿರುವ ಶ್ವೇತಾ, ಜೀ ಕನ್ನಡ ಕುಟುಂಬ ಪ್ರಶಸ್ತಿಗಳಲ್ಲೂ ಅತ್ಯುತ್ತಮ ನಿರೂಪಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈಯಕ್ತಿಕ ಜೀವನ

ಕೊಡಗಿನ ಸೋಮವಾರಪೇಟೆ ಮೂಲದ ಶ್ವೇತಾ, ಪತಿ ಕಿರಣ್ ಹಾಗೂ ಮಗ ಜಿಯಾನ್ ಜೊತೆಗಿನ ಕುಟುಂಬ ಜೀವನಕ್ಕೂ ಮಹತ್ವ ನೀಡುತ್ತಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅವರು ನಟಿ, ನಿರೂಪಕಿ ಮತ್ತು ರಿಯಾಲಿಟಿ ಶೋ ತಾರೆಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.