ಬೇಸಿಗೆಯ ಸುಡುವ ಬಿಸಿಲಿಗೆ ತಣ್ಣೀರಿನ ಸ್ನಾನ ಕೇವಲ ಆರಾಮ ನೀಡುವುದಲ್ಲದೆ, ಆರೋಗ್ಯಕ್ಕೂ ರಾಮಬಾಣ. ಇದು ದೇಹದ ತಾಪಮಾನವನ್ನು ತಗ್ಗಿಸಿ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ದೇಹದ ಉಷ್ಣತೆ ನಿಯಂತ್ರಣ (Regulates Body Temperature)
ಬೇಸಿಗೆಯ ಅತಿಯಾದ ಶಾಖದಿಂದ ದೇಹದ ತಾಪಮಾನ ಏರುತ್ತದೆ. ತಣ್ಣೀರಿನ ಸ್ನಾನ ಮಾಡುವುದರಿಂದ ದೇಹವು ತಕ್ಷಣ ತಂಪಾಗುತ್ತದೆ ಮತ್ತು ಶಾಖದಿಂದ ಉಂಟಾಗುವ ಆಯಾಸ ಕಡಿಮೆಯಾಗುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ (Healthy Skin and Hair)
ಬಿಸಿ ನೀರು ಚರ್ಮದ ಮೇಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಿ ಚರ್ಮ ಒಣಗುವಂತೆ ಮಾಡುತ್ತದೆ. ಆದರೆ ತಣ್ಣೀರು ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಇದರಿಂದ ಮೊಡವೆಗಳು ಕಡಿಮೆಯಾಗುತ್ತವೆ ಮತ್ತು ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ರಕ್ತ ಪರಿಚಲನೆ ಸುಧಾರಣೆ (Improves Blood Circulation)
ತಣ್ಣೀರು ದೇಹದ ಮೇಲೆ ಬಿದ್ದಾಗ, ರಕ್ತವು ದೇಹದ ಒಳಗಿನ ಪ್ರಮುಖ ಅಂಗಗಳನ್ನು ಬೆಚ್ಚಗಿಡಲು ವೇಗವಾಗಿ ಚಲಿಸುತ್ತದೆ. ಇದರಿಂದ ರಕ್ತ ಪರಿಚಲನೆ ಉತ್ತಮಗೊಂಡು ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಸಹಕಾರಿಯಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಳ (Boosts Immunity)
ತಣ್ಣೀರಿನ ಸ್ನಾನವು ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ
ಸ್ನಾಯುಗಳ ನೋವು ನಿವಾರಣೆ (Muscle Recovery)
ನೀವು ವ್ಯಾಯಾಮ ಮಾಡುವವರಾಗಿದ್ದರೆ, ವರ್ಕೌಟ್ ನಂತರ ತಣ್ಣೀರಿನ ಸ್ನಾನ ಮಾಡುವುದು ಸ್ನಾಯುಗಳ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳು ಹೆಚ್ಚಾಗಿ ಈ ವಿಧಾನವನ್ನು ಬಳಸುತ್ತಾರೆ.