ಮಳೆಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು!

ಭಾನುಪ್ರಿಯ ಡಿ.ಕೆ

ಮಳೆಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು!

ಮಳೆಗಾಲದಲ್ಲಿ ತಂಪಾದ ವಾತಾವರಣದಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಶೀತ, ಕೆಮ್ಮು ಹಾಗೂ ಜೀರ್ಣಕ್ರಿಯೆಯ ತೊಂದರೆಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ದಿನವಿಡೀ ಉಗುರುಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಹಿತಕರ.

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಉಗುರುಬೆಚ್ಚಗಿನ ನೀರು ಜೀರ್ಣಾಂಗ ವ್ಯೂಹವನ್ನು ಸಕ್ರಿಯಗೊಳಿಸುತ್ತದೆ. ಇದು ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ ಹಾಗೂ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರವಿಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಮಳೆಗಾಲದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಹರಡುವಿಕೆ ಹೆಚ್ಚು. ಬೆಚ್ಚಗಿನ ನೀರು ಸೇವಿಸುವುದರಿಂದ ಗಂಟಲಿನ ಸೋಂಕುಗಳು ನಿವಾರಣೆಯಾಗಿ, ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.

ಶೀತ ಮತ್ತು ನೆಗಡಿಯಿಂದ ಉಪಶಮನ

ತಂಪಾದ ಗಾಳಿಯಿಂದಾಗಿ ಮೂಗು ಕಟ್ಟುವುದು, ಗಂಟಲು ಕಿರಿಕಿರಿ ಮತ್ತು ಕಫದ ತೊಂದರೆ ಕಾಣಿಸಿಕೊಳ್ಳುತ್ತದೆ. ಬೆಚ್ಚಗಿನ ನೀರು ಕುಡಿಯುವುದರಿಂದ ಶ್ವಾಸಕೋಶದ ಮಾರ್ಗ ತಿಳಿಯಾಗಿ, ತಕ್ಷಣದ ಉಪಶಮನ ಸಿಗುತ್ತದೆ.

ದೇಹದ ವಿಷಕಾರಿ ಅಂಶಗಳ ಹೊರಹಾಕುವಿಕೆ

ಉಗುರುಬೆಚ್ಚಗಿನ ನೀರು ದೇಹದ ಉಷ್ಣತೆಯನ್ನು ನಿಯಂತ್ರಿಸಿ, ಬೆವರು ಮತ್ತು ಮೂತ್ರದ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನೈಸರ್ಗಿಕ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ.

ರಕ್ತಸಂಚಾರ ಸುಧಾರಣೆ

ಬೆಚ್ಚಗಿನ ನೀರು ಕುಡಿಯುವುದರಿಂದ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ದೇಹವಿಡೀ ರಕ್ತಸಂಚಾರ ಸರಾಗವಾಗಿ ನಡೆದು, ಕೀಲು ನೋವು ಮತ್ತು ಆಯಾಸ ಕಡಿಮೆಯಾಗುತ್ತದೆ.