ಊಟದ ನಂತರ ಹೊಟ್ಟೆ ನೋವನ್ನು ತಡೆಯಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ವಿನಾಯಕ ನಾಯಕ

ಊಟದ ನಂತರ ಹೊಟ್ಟೆ ನೋವನ್ನು ತಡೆಯಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಊಟದ ನಂತರ ಹೊಟ್ಟೆ ನೋವು, ಅಜೀರ್ಣ ಅಥವಾ ಗ್ಯಾಸ್ ಸಮಸ್ಯೆ ಅನೇಕರನ್ನು ಕಾಡುತ್ತದೆ. ತಿಂದ ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ ಇಡೀ ದಿನ ಅಸ್ವಸ್ಥತೆ ಉಂಟಾಗಬಹುದು. ಕೇವಲ ಆಹಾರದ ಆಯ್ಕೆ ಮಾತ್ರವಲ್ಲದೆ, ಊಟದ ನಂತರ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೂ ಇದಕ್ಕೆ ಕಾರಣವಾಗಿರುತ್ತವೆ. ಆದ್ದರಿಂದ, ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಹೊಟ್ಟೆ ನೋವನ್ನು ತಡೆಯಲು ಸಹಾಯ ಮಾಡುವ 5 ಸುಲಭ ಮತ್ತು ಪರಿಣಾಮಕಾರಿ ಅಭ್ಯಾಸಗಳ ಬಗ್ಗೆ ತಿಳಿಯೋಣ.

ವಜ್ರಾಸನದಲ್ಲಿ ಕುಳಿತುಕೊಳ್ಳಿ

ಊಟವಾದ ತಕ್ಷಣ ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ವಜ್ರಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು ಜೀರ್ಣಕ್ರಿಯೆಗೆ ಅತ್ಯುತ್ತಮ. ಇದು ಜೀರ್ಣಾಂಗವ್ಯೂಹಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಗ್ಯಾಸ್ ಹಾಗೂ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.

ಕನಿಷ್ಟ ನೂರು ಹೆಜ್ಜೆ ನಡಿಯಿರಿ

ಊಟ ಮಾಡಿದ ತಕ್ಷಣ ಮಲಗಬೇಡಿ ಅಥವಾ ಭಾರೀ ವ್ಯಾಯಾಮ ಮಾಡಬೇಡಿ. ಬದಲಿಗೆ, ಮನೆಯ ಒಳಗೇ ಅಥವಾ ಹೊರಗೆ ಕನಿಷ್ಠ 100 ಹೆಜ್ಜೆಗಳಷ್ಟು ನಿಧಾನವಾಗಿ ನಡೆಯಿರಿ. ಇದು ಆಹಾರವು ಜಠರದಲ್ಲಿ ಸರಿಯಾಗಿ ಚಲಿಸಲು ಮತ್ತು ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

ಉಗುರುಬೆಚ್ಚಗಿನ ನೀರು ಸೇವಿಸಿ

ಊಟದ ನಂತರ ತಣ್ಣನೆಯ ನೀರು ಕುಡಿಯುವ ಬದಲಿಗೆ, ಅರ್ಧ ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ತಿಂದ ಆಹಾರದಲ್ಲಿರುವ ಎಣ್ಣೆಯಂಶ ಅಥವಾ ಕೊಬ್ಬು ಸುಲಭವಾಗಿ ಕರಗಲು ನೆರವಾಗುತ್ತದೆ.

ಸೋಂಪು ಕಾಳು ಅಥವಾ ಏಲಕ್ಕಿ ಅಗಿಯಿರಿ

ಭಾರತೀಯ ಸಂಪ್ರದಾಯದಂತೆ ಊಟದ ನಂತರ ಸ್ವಲ್ಪ ಸೋಂಪು ಕಾಳುಗಳನ್ನು ಅಗಿಯುವುದು ಕೇವಲ ಬಾಯಿ ತಾಜಾತನಕ್ಕಾಗಿ ಮಾತ್ರವಲ್ಲ, ಇದು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸಿ ಗ್ಯಾಸ್ ಉಂಟಾಗುವುದನ್ನು ತಡೆಯುತ್ತದೆ. ಏಲಕ್ಕಿ ಕೂಡ ಅಸಿಡಿಟಿ ತಡೆಯಲು ಸಹಕಾರಿ.

ತಕ್ಷಣ ಮಲಗುವುದನ್ನು ತಪ್ಪಿಸಿ

ಊಟವಾದ ತಕ್ಷಣ ಹಾಸಿಗೆಯ ಮೇಲೆ ಮಲಗುವುದು ಆ್ಯಸಿಡ್ ರಿಫ್ಲಕ್ಸ್ ಅಥವಾ ಎದೆ ಉರಿ ಮತ್ತು ಹೊಟ್ಟೆ ನೋವಿಗೆ ಪ್ರಮುಖ ಕಾರಣ. ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 2 ರಿಂದ 3 ಗಂಟೆಗಳ ಅಂತರವಿರಲಿ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಿ ಹೊಟ್ಟೆ ಭಾರವಾಗುವುದು ತಪ್ಪುತ್ತದೆ.