ಆರೋಗ್ಯಕರ ಜೀವನಕ್ಕಾಗಿ 6 ಪ್ರೋಟೀನ್ ಭರಿತ ಉಪಹಾರಗಳು

ವಿನಾಯಕ ನಾಯಕ

ಆರೋಗ್ಯಕರ ಜೀವನಕ್ಕಾಗಿ 6 ಪ್ರೋಟೀನ್ ಭರಿತ ಉಪಹಾರಗಳು

ನಮ್ಮ ದೇಹವು ರಾತ್ರಿಯಿಡೀ ವಿಶ್ರಾಂತಿಯಲ್ಲಿರುತ್ತದೆ ಮತ್ತು ಸುಮಾರು 8-10 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸಿರುವುದಿಲ್ಲ. ಹೆಚ್ಚಿನವರು ಬೆಳಗಿನ ಉಪಹಾರಕ್ಕೆ ಕೇವಲ ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಇದಕ್ಕೆ ಪ್ರೋಟೀನ್ ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಮೊಳಕೆಯುಕ್ತ ಕಾಳುಗಳ ಸಲಾಡ್

ಮೊಳಕೆ ಬಂದ ಹೆಸರುಕಾಳು, ಕಡಲೆಕಾಳು ಅಥವಾ ಹುರುಳಿಕಾಳು ಪ್ರೋಟೀನ್‌ನ್ನು ಹೆಚ್ಚು ಹೊಂದಿರುತ್ತವೆ. ಮೊಳಕೆ ಬಂದ ಕಾಳುಗಳಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಸ್ವಲ್ಪ ನಿಂಬೆ ರಸ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಇದು ಅತ್ಯಂತ ನೈಸರ್ಗಿಕ ಮತ್ತು ಪೌಷ್ಟಿಕವಾದ ಉಪಹಾರವಾಗಿದೆ

ರಾಗಿ ಅಂಬಲಿ ಅಥವಾ ರಾಗಿ ರೊಟ್ಟಿ

ರಾಗಿ ಕೇವಲ ಕ್ಯಾಲ್ಸಿಯಂ ಮಾತ್ರವಲ್ಲ, ಉತ್ತಮ ಪ್ರೋಟೀನ್ ಮೂಲವೂ ಆಗಿದೆ. ರಾಗಿ ಹಿಟ್ಟಿಗೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ಅಂಬಲಿ ಮಾಡಬಹುದು. ಅಥವಾ ಸೊಪ್ಪು ಮತ್ತು ತರಕಾರಿಗಳನ್ನು ಹಾಕಿ ರೊಟ್ಟಿ ತಯಾರಿಸಬಹುದು. ಇದಕ್ಕೆ ಕಡಲೆಕಾಯಿ ಚಟ್ನಿ ಬಳಸಿದರೆ ಪ್ರೋಟೀನ್ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ.

ಪನೀರ್ ಬುರ್ಜಿ ಅಥವಾ ಪನೀರ್ ಸ್ಯಾಂಡ್‌ವಿಚ್

ಸಸ್ಯಾಹಾರಿಗಳಿಗೆ ಪನೀರ್ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಮಸಾಲೆಗಳೊಂದಿಗೆ ಪನೀರ್​ನ್ನು ಉದುರು ಉದುರಾಗಿ ಹುರಿದು 'ಬುರ್ಜಿ' ಮಾಡಬಹುದು. ಇದನ್ನು ಗೋಧಿ ಚಪಾತಿಯೊಂದಿಗೆ ಸೇವಿಸಿದರೆ ಉತ್ತಮ.

ಹೆಸರುಬೇಳೆ ದೋಸೆ

ಸಾಮಾನ್ಯ ಅಕ್ಕಿ ದೋಸೆಗಿಂತ ಹೆಸರುಬೇಳೆ ದೋಸೆಯಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ನೆನೆಸಿದ ಹೆಸರುಬೇಳೆಯನ್ನು ಶುಂಠಿ ಮತ್ತು ಹಸಿಮೆಣಸಿನಕಾಯಿ ಹಾಕಿ ರುಬ್ಬಿ ದೋಸೆ ಮಾಡುವುದು. ಇದಕ್ಕೆ ಸ್ವಲ್ಪ ಜೀರಿಗೆ ಸೇರಿಸಿದರೆ ಜೀರ್ಣಕ್ರಿಯೆಗೂ ಸಹಕಾರಿಯಾಗುತ್ತದೆ.

ಮೊಟ್ಟೆಯ ವಿವಿಧ ಖಾದ್ಯಗಳು

ನೀವು ಮಾಂಸಾಹಾರ ಸೇವಿಸುವವರಾಗಿದ್ದರೆ ಮೊಟ್ಟೆಗಿಂತ ಉತ್ತಮ ಪ್ರೋಟೀನ್ ಮೂಲ ಇನ್ನೊಂದಿಲ್ಲ. ಬೇಯಿಸಿದ ಮೊಟ್ಟೆ,ಆಮ್ಲೆಟ್ ಅಥವಾ ಎಗ್ ಬುರ್ಜಿ ತಯಾರಿಸಬಹುದು. ಮೊಟ್ಟೆಯ ಬಿಳಿ ಭಾಗದಲ್ಲಿ ಗರಿಷ್ಠ ಪ್ರೋಟೀನ್ ಇರುತ್ತದೆ. ಇದನ್ನು ಗೋಧಿ ಬ್ರೆಡ್ ಅಥವಾ ಚಪಾತಿಯೊಂದಿಗೆ ಸೇವಿಸಿದರೆ ಒಳ್ಳೆಯದು.

ಓಟ್ಸ್

ಓಟ್ಸ್‌ನಲ್ಲಿ ನಾರಿನಂಶ ಮತ್ತು ಪ್ರೋಟೀನ್ ಸತ್ವ ಹೆಚ್ಚಿರುತ್ತದೆ. ಓಟ್ಸ್​ನ್ನು ಹಾಲಿನೊಂದಿಗೆ ಬೇಯಿಸಿ ಅದಕ್ಕೆ ಬಾದಾಮಿ ಅಥವಾ ಅಕ್ರೂಟ್ ಚೂರುಗಳನ್ನು ಸೇರಿಸಬಹುದು. ಸಸ್ಯಾಹಾರಿಗಳು ಓಟ್ಸ್‌ಗೆ ಮಜ್ಜಿಗೆ ಮತ್ತು ತರಕಾರಿಗಳನ್ನು ಸೇರಿಸಿ ಓಟ್ಸ್ ಉಪ್ಪಿಟ್ಟು ಕೂಡ ಮಾಡಬಹುದು.