ಲಿವರ್ ಆರೋಗ್ಯಕ್ಕೆ ಸಂಜೀವಿನಿ ಈ ಹಣ್ಣುಗಳು

ಮಣಿಕಂಠ ಪಾ ಹಿರೇಮಠ

ಲಿವರ್ ಆರೋಗ್ಯಕ್ಕೆ ಸಂಜೀವಿನಿ ಈ ಹಣ್ಣುಗಳು

ಆರೋಗ್ಯಕರ ಯಕೃತ್ತು (ಲಿವರ್) ಇಡೀ ದೇಹದ ಚಯಾಪಚಯ ಮತ್ತು ವಿಷತ್ಯಾಜ್ಯ ಹೊರಹಾಕುವ ಪ್ರಮುಖ ಅಂಗ. ಪೋಷಕಾಂಶಭರಿತ ತಾಜಾ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಲಿವರ್ ಉರಿಯೂತ ಕಡಿಮೆಯಾಗಿ, ನೈಸರ್ಗಿಕವಾಗಿ ಶುದ್ಧಗೊಂಡು ಯಕೃತ್ತಿನ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಆರೋಗ್ಯ ಹೆಚ್ಚುತ್ತದೆ.

ಸೇಬು

ಸೇಬಿನಲ್ಲಿರುವ ಪೆಕ್ಟಿನ್ ಎಂಬ ನಾರಿನಂಶವು ಜೀರ್ಣಾಂಗವ್ಯೂಹದಲ್ಲಿರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ಬಂಧಿಸಿ ಹೊರಹಾಕುತ್ತದೆ. ಇದು ಲಿವರ್ ತನ್ನ ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುವಾಗ ಅನಗತ್ಯ ಒತ್ತಡಕ್ಕೆ ಒಳಗಾಗದಂತೆ ತಡೆಯುತ್ತದೆ. ದಿನಕ್ಕೊಂದು ಸೇಬು ತಿಂದರೆ ಲಿವರ್ ಆರೋಗ್ಯ ವೃದ್ಧಿಸುತ್ತದೆ.

ಸಿಟ್ರಸ್ ಹಣ್ಣುಗಳು (ಲಿಂಬೆ, ಕಿತ್ತಳೆ)

ಇವುಗಳಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಲಿಂಬೆರಸ ಬೆರೆಸಿ ಕುಡಿಯುವುದರಿಂದ ಲಿವರ್‌ನಲ್ಲಿ ಎಂಜೈಮ್‌ಗಳು ಕ್ರಿಯಾಶೀಲಗೊಂಡು, ಕೊಬ್ಬನ್ನು ಕರಗಿಸಲು ಮತ್ತು ವಿಷತ್ಯಾಜ್ಯಗಳನ್ನು ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ.

ಬೆರ್ರಿ ಹಾಗೂ ಕೆಂಪು ದ್ರಾಕ್ಷಿ

ಇವುಗಳಲ್ಲಿರುವ ಆಂಥೋಸಯಾನಿನ್ ಮತ್ತು ರೇಸ್ವೆರಟ್ರಾಲ್ ಪ್ರಬಲ ಆಂಟಿಆಕ್ಸಿಡೆಂಟ್‌ಗಳಾಗಿವೆ. ಇವು ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟಲು ಅತ್ಯುತ್ತಮ. ಅಲ್ಲದೆ ಲಿವರ್‌ನಲ್ಲಿ ಉಂಟಾಗುವ ಉರಿಯೂತ ಮತ್ತು ಕೋಶಗಳ ಹಾನಿಯನ್ನು ಇವು ತಡೆಯುತ್ತವೆ.

ಆವಕಾಡೊ

ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಗ್ಲುಟಾಥಿಯೋನ್ ಎಂಬ ಪ್ರಬಲ ಪೋಷಕಾಂಶವಿದ್ದು, ಲಿವರ್ ಜೀವಕೋಶಗಳನ್ನು ನವೀಕರಿಸಲು ಮತ್ತು ದೇಹದಲ್ಲಿ ಸ್ವಯಂಚಾಲಿತವಾಗಿ ತಯಾರಾಗುವ ಗ್ಲುಟಾಥಿಯೋನ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ, ಇದು ಲಿವರ್ ಫಿಲ್ಟರ್‌ನಂತೆ ಕೆಲಸ ಮಾಡಲು ಅತ್ಯಗತ್ಯ.