ನಿದ್ರಾ ಹೀನತೆಯಿಂದ ಉಂಟಾಗುವ 5 ರೋಗಗಳು

ವಿನಾಯಕ ನಾಯಕ

ನಿದ್ರಾ ಹೀನತೆಯಿಂದ ಉಂಟಾಗುವ 5 ರೋಗಗಳು

ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಅಸಮರ್ಪಕ ನಿದ್ದೆ ಸಾಮಾನ್ಯವಾಗಿದೆ. ಆದರೆ, ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ದೆ ಮಾಡದಿದ್ದರೆ ಅದು ಕೇವಲ ಸುಸ್ತಿಗೆ ಮಾತ್ರವಲ್ಲ, ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿದ್ದೆಯ ಕೊರತೆಯಿಂದ ಕಾಡುವ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಬೊಜ್ಜು, ಖಿನ್ನತೆ ಮತ್ತು ರೋಗನಿರೋಧಕ ಶಕ್ತಿ ಕುಂಟಿತವಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳು (Heart Diseases)

ದೀರ್ಘಕಾಲದವರೆಗೆ ಸರಿಯಾಗಿ ನಿದ್ದೆ ಮಾಡದಿದ್ದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡಿ, ಭವಿಷ್ಯದಲ್ಲಿ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವನ್ನು ದುಪ್ಪಟ್ಟು ಮಾಡುತ್ತದೆ.

ಮಧುಮೇಹ (Type 2 Diabetes)

ನಿದ್ದೆಯ ಕೊರತೆಯು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ದೇಹಕ್ಕೆ ಸಾಧ್ಯವಾಗದೆ ಟೈಪ್-2 ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಅತಿಯಾದ ಬೊಜ್ಜು ಶೇಖರಣೆ (Obesity)

ನಿದ್ದೆ ಕಡಿಮೆಯಾದಾಗ ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳಾದ ಗ್ರೆಲಿನ್ ಮತ್ತು ಲೆಪ್ಟಿನ್ ಏರುಪೇರಾಗುತ್ತವೆ. ಇದರಿಂದ ಜಂಕ್ ಫುಡ್ ತಿನ್ನುವ ಬಯಕೆ ಹೆಚ್ಚಾಗಿ, ದೇಹದ ತೂಕ ಮತ್ತು ಬೊಜ್ಜು ಅತ್ಯಂತ ವೇಗವಾಗಿ ಹೆಚ್ಚಾಗುತ್ತದೆ.

ಖಿನ್ನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು (Depression & Mental Health Issues)

ಮೆದುಳಿನ ಆರೋಗ್ಯಕ್ಕೆ ಗಾಢವಾದ ನಿದ್ದೆ ಅತ್ಯಗತ್ಯ. ನಿದ್ದೆಯಿಲ್ಲದಿದ್ದರೆ ಮೆದುಳು ಸರಿಯಾಗಿ ವಿಶ್ರಾಂತಿ ಪಡೆಯುವುದಿಲ್ಲ. ಇದು ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಮತ್ತು ಬೇಗನೆ ಸಿಟ್ಟು ಬರುವಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು (Weak Immune System)

ನಾವು ಮಲಗಿದಾಗ ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡುವ ಸೈಟೊಕಿನ್ಸ್‌ (Cytokines) ಎಂಬ ಪ್ರೊಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ನಿದ್ದೆ ಕಡಿಮೆಯಾದಾಗ ಈ ಪ್ರೊಟೀನ್‌ಗಳ ಉತ್ಪತ್ತಿ ಕಡಿಮೆಯಾಗಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.