ವಿಜಯವಾಣಿ ಸುದ್ದಿ ಜಾಲ
ರುಕ್ಮಿಣಿ ವಸಂತ್ ಕರ್ನಾಟಕದ ಬೆಂಗಳೂರಿನಲ್ಲಿ ಬೆಳೆದವರು. ಇವರ ತಂದೆ ಕರ್ನಲ್ ವಸಂತ್ ವೇಣುಗೋಪಾಲ್ ಭಾರತೀಯ ಸೇನೆಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನಲ್ಲಿ ಅಧಿಕಾರಿಯಾಗಿದ್ದು, 2007ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದರು.
ಕಲೆಯ ಹಿನ್ನೆಲೆಯಲ್ಲೇ ಬೆಳೆದ ರುಕ್ಮಿಣಿ, ಲಂಡನ್‌ನ ಪ್ರತಿಷ್ಠಿತ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ ಸಂಸ್ಥೆಯಲ್ಲಿ ನಟನೆಯಲ್ಲಿ ಪದವಿ ಪಡೆದಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಬರುವ ಮುನ್ನವೇ ರಂಗಭೂಮಿ ಮತ್ತು ಪಾಶ್ಚಿಮಾತ್ಯ ನಾಟಕಗಳಲ್ಲಿ ಅಭಿನಯಿಸಿ ವೃತ್ತಿಪರ ನಟನಾ ತರಬೇತಿ ಪಡೆದಿದ್ದಾರೆ.
2019ರಲ್ಲಿ ಎಂ. ಜಿ. ಶ್ರೀನಿವಾಸ್ ನಿರ್ದೇಶಿಸಿ ನಟಿಸಿದ 'ಬೀರ್‌ಬಲ್ ಟ್ರಿಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ' ಎಂಬ ಕನ್ನಡ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದ ಮೂಲಕ ಜಾಹ್ನವಿ ಪಾತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿನ 'ಪ್ರಿಯಾ' ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಇವರ ನೈಜ, ಭಾವನಾತ್ಮಕ ಅಭಿನಯಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಕನ್ನಡದ ಜೊತೆಗೆ ಅವರು ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ವಿಸ್ತರಿಸಿದ್ದಾರೆ. ತೆಲುಗಿನಲ್ಲಿ 'ಅಪ್ಪೂಡೋ ಇಪ್ಪೂಡೋ ಎಪ್ಪೂಡೋ' ಚಿತ್ರದ ಮೂಲಕ ಎಂಟ್ರಿ ಕೊಟ್ಟರೆ, ತಮಿಳಿನಲ್ಲಿ ಎ. ಆರ್. ಮುರುಗದಾಸ್ ನಿರ್ದೇಶನದ, ಶಿವಕಾರ್ತಿಕೇಯನ್ ನಟನೆಯ ಬಿಗ್ ಬಜೆಟ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀಮುರಳಿ ನಟನೆಯ ಬಿಗ್ ಆಕ್ಷನ್ ಚಿತ್ರ 'ಬಘೀರ'ದಲ್ಲಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನದಾರಿಯಲ್ಲಿ' ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.