ಅಳೆದು ತೂಗಿ ನೀಡುವ ಪ್ರಶಸ್ತಿ ಶ್ರೇಷ್ಠ

ವಿಜಯವಾಣಿ ಸುದ್ದಿಜಾಲ ಸೇಡಂ
ಪ್ರಶಸ್ತಿಗಳು ಲಾಭಿಯಿಂದ ಲಭಿಸುವುದಕ್ಕಿಂತ ಅಳೆದು ತೂಗಿ ಸಿಗುವ ಪ್ರಶಸ್ತಿಗಳು ಬಹು ಶ್ರೇಷ್ಠ, ಹೀಗೆ ಸಿಗುವ ಪ್ರಶಸ್ತಿಗಳಿಂದ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಲಿದೆ ಎಂದು ಮಾಜಿ ಸಚಿವ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.
ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪಟ್ಟಣದ ಶ್ರೀಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಆಯೋಜಿಸಿದ 18ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಹಾಗೂ ಅಮ್ಮ ಗೌರವ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ತಾಯಿಯನ್ನು ಪ್ರೀತಿಸುವವರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಮಾನವ ಕುಲ ಕೋಟಿಯನ್ನು ಪ್ರೀತಿಸುವ ವ್ಯಕ್ತಿ ಸಮಾಜಕ್ಕೆ ಅವಶ್ಯನಾಗಿದ್ದಾನೆ. ವಾಸ್ತವದ ಪ್ರಜ್ಞೆ ಮನುಷ್ಯರಾದ ನಮ್ಮಲ್ಲಿ ಬೆಳೆಯಬೇಕಾಗಿದೆ ಎಂದರು.
ಅಮ್ಮ ಪ್ರಶಸ್ತಿ ಸ್ವೀಕರಿಸಿದ ನಟ ಪ್ರಕಾಶ ರೈ ಮಾತನಾಡಿ, ಸಣ್ಣ ಪ್ರಶಸ್ತಿಯಾದರೂ ತೊಂದರೆ ಇಲ್ಲ, ಆತನ ವ್ಯಕ್ತಿತ್ವ ಅಳೆದು ತೂಗಿ ನೀಡುವ ಅಮ್ಮನ ಹೆಸರಿನ ಪ್ರಶಸ್ತಿ ಶ್ರೇಷ್ಠ. ಇಲ್ಲಿ ಪ್ರದಾನ ಮಾಡುತ್ತಿರುವ ಅಮ್ಮ ಪ್ರಶಸ್ತಿಯು ಜೀವನದ ತಿರುವನ್ನೇ ಬದಲಿಸುವ ಶಕ್ತಿ ಹೊಂದಿದೆ. ಸುಂದರ ಸಮಾಜ ನಿಮರ್ಾಣಕ್ಕೆ ಧ್ವನಿ ಎತ್ತುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ಸಮಾಜದಲ್ಲಿ ಪ್ರೀತಿಯಿಂದ ಜೀವಿಸಿದರೆ ಬೆಳೆಯಲು ಸಾಧ್ಯವಾಗುತ್ತದೆ. ಹಿರಿಯರನ್ನು ಅರ್ಥ ಮಾಡಿಕೊಂಡು ಯುವ ಸಮುದಾಯ ಬದುಕು ನಡೆಸಬೇಕು. ಬದುಕಿನ ಉದಾಹರಣೆ ತಿಳಿದಾಗ ಯಶಸ್ಸಿಗೆ ಸಹಕಾರಿ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತೆ, ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರ ಇದ್ದರು. ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲರಡ್ಡಿ ಮುನ್ನೂರ ನಿರೂಪಣೆ ಮಾಡಿ, ಸ್ವಾಗತಿಸಿದರು.

ಪ್ರಶಸ್ತಿ ಪ್ರದಾನ: ಪ್ರಸ್ತುತ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ರೇಣುಕಾ ರಮಾನಂದ, ಯ.ರು.ಪಾಟೀಲ, ಶಶಿಕಾಂತ ದೇಸಾಯಿ ಅವರಿಗೆ ಅಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಗೆ ಸ್ವ್ಯಾನ್ ಕೃಷ್ಣಮೂರ್ತಿ, ಚಂದ್ರಕಾಂತ ಕರದಳ್ಳಿ, ಚಂದಮ್ಮ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.