ಲೋಕಸಭೆ ಚುನಾವಣೆಗೂ ಮುನ್ನ ರಾಮ ಮಂದಿರ ನಿರ್ಮಾಣ ನಿಲುವು ಕಾಂಗ್ರೆಸ್​ ಸ್ಪಷ್ಟಪಡಿಸಲಿ ಎಂದ ಅಮಿತ್ ಷಾ

ರಾಯಚೂರು: ಭಾರತೀಯ ಜನತಾ ಪಾರ್ಟಿ, ಬೇರೆ ಪಾರ್ಟಿಗಳಿಗಿಂತ ಸ್ವಲ್ಪ ಬೇರೆ ಇದೆ. ಕಾರ್ಯಕರ್ತರಿಂದ ದೊಡ್ಡದೊಡ್ಡ ಚುನಾವಣೆಗಳು, ಕಷ್ಟದ ಚುನಾವಣೆಗಳನ್ನುಬಿಜೆಪಿ ಗೆದ್ದಿದೆ. ದೇಶದ ಜನರು ಮುಂದಿನ ಪ್ರಧಾನಿ ಮೋದಿ ಎಂದು ತೀರ್ಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಸಿಂಧನೂರಿನ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಗುರುವಾರ ಸಂಜೆ ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಲೋಕಸಭೆ ಚುನಾವಣೆಗೂ ಮೊದಲೇ ಪಕ್ಷದ ನಿಲುವು ಸ್ಪಷ್ಟಪಡಿಸಬೇಕು. ಮೋದಿ ಅಲೆಯಿಂದ ಕಾಂಗ್ರೆಸ್ ಹೆದರಿದ್ದು, ಮಹಾಘಟ ಬಂಧನ್ ರಚಿಸಿದೆ. ಆ ಘಟಬಂಧನ್ ಗೆ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಮಹಾಘಟಬಂಧನ್ ಅಧಿಕಾರಕ್ಕೆ ಬರುವುದು ಅಸಾಧ್ಯ. ಮಹಾಘಟಬಂಧನ ಗೆದ್ದರೆ ಯಾರು ಪ್ರಧಾನ ಮಂತ್ರಿ? ಒಬ್ಬೊಬ್ಬರು ಒಂದೊಂದು ದಿನ ಪ್ರಧಾನಿ ಆಗಲಿದ್ದಾರೆ. ಮತ್ತೊಂದು ದಿನ ಖಾಲಿ ಉಳಿಯಲಿದೆ. ಮಮತಾ ಬ್ಯಾನರ್ಜಿ, ದೇವೇಗೌಡ.. ಹೀಗೆ ಒಬ್ಬೊಬ್ಬರು ಒಂದೊಂದು ದಿನ ಪ್ರಧಾನ ಮಂತ್ರಿ ಆಗ್ತಾರೆ ಎಂದು ವ್ಯಂಗವಾಡಿದರು.

ಜನರಿಂದ ಅಲ್ಲ, ಸೋನಿಯಾ ಗಾಂಧಿಯಿಂದ ಸಿಎಂ ಆಗಿದ್ದೇನೆ ಅಂತಾರೆ ಕುಮಾರಸ್ವಾಮಿ. ಜನಪರ ಸರ್ಕಾರ ಕರ್ನಾಟಕದಲ್ಲಿ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕುಟುಂಬ ರಾಜಕೀಯ ಮಾಡುತ್ತಲೇ ದೇಶವನ್ನು ಕೊಳ್ಳೆ ಹೊಡೆದಿವೆ ಎಂದು ಷಾ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ರಾಹುಲ್ ಗಾಂಧಿಯವರು ಕೇಂದ್ರಕ್ಕೆ ರೈತರ ಸಾಲಮನ್ನಾ ಮಾಡಲು ಒತ್ತಾಯಿಸುತ್ತಾರೆ. ಆದರೆ, ಅವರ ಪಕ್ಷದ ಸರ್ಕಾರ ಇರುವ ಕರ್ನಾಟಕದಲ್ಲಿ ರೈತರಿಗೆ ಭರವಸೆ ನೀಡಿದಂತೆ ಸಾಲಮನ್ನಾ ಮಾಡಿಲ್ಲ. 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ವಿವಿಧೆಡೆ ವಾಸವಾಗಿರುವ ನುಸುಳುಕೋರರನ್ನು ದೇಶದಿಂದ ಹೊರಹಾಕಲಾಗುವುದು ಎಂದರು.