ಬಳ್ಳಾರಿ ಟಸ್ಕರ್ಸ್​ಗೆ ವೈಶಾಕ್!

|ಸಂತೋಷ ವೈದ್ಯ

ಹುಬ್ಬಳ್ಳಿ: ಅನುಭವಿ ಬ್ಯಾಟ್ಸ್​ಮನ್​ಗಳಾದ ಅಮಿತ್ ವರ್ಮ (59ರನ್, 46 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ರಾಜು ಭಟ್ಕಳ್ (48 ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಹಾಗೂ ವೇಗಿ ವೈಶಾಕ್ ವಿಜಯ್ ಕುಮಾರ್ (20ಕ್ಕೆ 4) ಮಾರಕ ದಾಳಿ ನೆರವಿನಿಂದ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ಕೆಪಿಎಲ್-7ರಲ್ಲಿ ಶುಭಾರಂಭ ಕಂಡಿತು. ರಾಜನಗರದ ಕೆಎಸ್​ಸಿಎ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಜೆ.ಸುಚಿತ್ ಸಾರಥ್ಯದ ಮೈಸೂರು ತಂಡ 7 ವಿಕೆಟ್​ಗಳಿಂದ ಬಳ್ಳಾರಿ ಟಸ್ಕರ್ಸ್ ತಂಡವನ್ನು ಸೋಲಿಸಿತು. ಇದು ಬಳ್ಳಾರಿ ತಂಡಕ್ಕೆ ಸತತ 2ನೇ ಸೋಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡ, ಭಾರತ 19 ವಯೋಮಿತಿ ತಂಡದ ಸದಸ್ಯ ದೇವದತ್ ಪಡಿಕ್ಕಲ್ (60 ರನ್, 42 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಆರಂಭಿಕ ರೋಹನ್ ಕದಂ (59 ರನ್, 43 ಎಸೆತ, 6 ಬೌಂಡರಿ, 3 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್​ಗೆ 145 ರನ್​ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮೈಸೂರು 18.5 ಓವರ್​ಗಳಲ್ಲಿ 3 ವಿಕೆಟ್​ಗೆ 147 ರನ್​ಗಳಿಸಿ ಗೆಲುವಿನ ಗುರಿ ಮುಟ್ಟಿತು. ಬಳ್ಳಾರಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕಿ ಇನಿಂಗ್ಸ್ ಆರಂಭಿಸಿದ ಮೈಸೂರು ಆರಂಭದಲ್ಲೇ ಅರ್ಜುನ್ ಹೊಯ್ಸಳ (1) ವಿಕೆಟ್ ಕಳೆದುಕೊಂಡಿತು. ರಾಜು ಭಟ್ಕಳ್ ಹಾಗೂ ಅಮಿತ್ ವರ್ಮ ಜೋಡಿ 2ನೇ ವಿಕೆಟ್​ಗೆ 91 ರನ್ ಜತೆಯಾಟವಾಡಿ ತಂಡದ ಗೆಲುವನ್ನು ಸುಲಭವಾಗಿಸಿತು.

ರೋಹನ್-ದೇವದತ್ ಕಮಾಲ್: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡಕ್ಕೆ ರೋಹನ್ ಕದಂ ಹಾಗೂ ದೇವದತ್ ಪಡಿಕಲ್ ಆಸರೆಯಾದರು. ಈ ಜೋಡಿ ಬೃಹತ್ ಮೊತ್ತ ಪೇರಿಸಲು ಉತ್ತಮ ಅಡಿಪಾಯ ಹಾಕಿಕೊಟ್ಟಿತು. 2ನೇ ವಿಕೆಟ್​ಗೆ ಎದುರಿಸಿದ 54 ಎಸೆತಗಳಲ್ಲಿ 92 ರನ್ ಜತೆಯಾಟವಾಡಿತು. ಆದರೆ, ಕೊನೇ ಆರು ಓವರ್​ಗಳಲ್ಲಿ 29 ರನ್​ಗಳಿಸಿದ ಬಳ್ಳಾರಿ 7 ವಿಕೆಟ್ ಕೈಚೆಲ್ಲಿತು.