ಷಾ ಹೆಲಿಕಾಪ್ಟರ್​ಗೆ ತಕರಾರು

ಕೋಲ್ಕತ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಲಿಕಾಪ್ಟರನ್ನು ಮಾಲದಾ ಏರ್​ಸ್ಟ್ರಿಪ್​ನಲ್ಲಿ ಇಳಿಸಲು ಸರ್ಕಾರದ ಅನುಮತಿ ನೀಡಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿರಾಕರಿಸಿ ವಿವಾದಕ್ಕೆ ಗುರಿಯಾದರು. ಬಳಿಕ ಆಕ್ಷೇಪ ಎದುರಾಗುತ್ತಿದ್ದಂತೆ ಅನುಮತಿ ನೀಡಿ ಕೈತೊಳೆದುಕೊಂಡಿದ್ದಾರೆ. ‘ಏರ್​ಸ್ಟ್ರಿಪ್​ನ ನವೀಕರಣ ಕಾರ್ಯ ನಡೆಯುತ್ತಿದೆ. ಹೆಲಿಪ್ಯಾಡ್​ನಲ್ಲಿ ನಿರ್ಮಾಣ ಸಾಮಗ್ರಿಗಳು ಬಿದ್ದಿರುವ ಕಾರಣ ಸುರಕ್ಷತಾ ದೃಷ್ಟಿಯಿಂದ ಅನುಮತಿ ನೀಡಿರಲಿಲ್ಲ’ ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಪಯಣಿಸುತ್ತಿದ್ದ ಹೆಲಿಕಾಪ್ಟರ್ ಇದೇ ಏರ್​ಸ್ಟ್ರಿಪ್​ನಲ್ಲಿ ಇಳಿದಿತ್ತು. ಆಗ ನಿರ್ಮಾಣ ಸಾಮಗ್ರಿ ಇರಲಿಲ್ಲವೆ ಎಂದು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಮಮತಾಗೆ ತಿರುಗೇಟು ನೀಡಲು ರೆಸಾರ್ಟ್​ವೊಂದರ ಹೆಲಿಪ್ಯಾಡ್​ನಲ್ಲಿ ಹೆಲಿಕಾಪ್ಟರ್ ಇಳಿಸಲು ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.