ಆ ಒಂದು ಘಟನೆ ನೆನಪಿಸಿಕೊಂಡರೆ ನನಗೆ ಇನ್ನೂ ನೋವಾಗುತ್ತದೆ, ಅದನ್ನು ನೋಡಿಯೂ ಕಾಂಗ್ರೆಸ್​ ಕೈಕಟ್ಟಿ ಕುಳಿತಿತ್ತು: ಅಮಿತ್​ ಷಾ

ಪಲಾಮು (ಜಾರ್ಖಂಡ): ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ರಜೆ ಪಡೆದು ಮೋಜು ಮಾಡಲು ತೆರಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಟೀಕಿಸಿದ್ದಾರೆ.

ಪಲಾಮುವಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿಜೀ ಜತೆ ನಾನು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅವರು ಒಂದೇ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಿದ್ದಾರೆ. ಆದರೆ ರಾಹುಲ್​ ಗಾಂಧಿಯವರು ರಜೆ ಪಡೆದು ಮೋಜು ಮಾಡಲೆಂದು ದೇಶವನ್ನೇ ಬಿಟ್ಟು ತೆರಳುತ್ತಾರೆ. ಆಗ ಅವರಿಗೆ ಪಕ್ಷ, ಮುಖಂಡರು, ಕಾರ್ಯಕರ್ತರು ಯಾವುದೂ ಮುಖ್ಯವಾಗುವುದಿಲ್ಲ. ಅದು ಹೋಗಲಿ ಎಂದರೆ, ಅವರ ಅಮ್ಮನ ಬಗ್ಗೆಯೂ ಅವರು ಸ್ವಲ್ಪವೂ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಆಡಳಿತವಿದ್ದಾಗ ಪಾಕ್​ನ ಉಗ್ರರ ದಾಳಿಗೆ ಒಂದು ಬಾರಿಯೂ ತಕ್ಕದಾದ ಉತ್ತರ ಕೊಟ್ಟಿಲ್ಲ. ನನಗೆ ನೆನಪಿದೆ, ಹೇಮರಾಜ್​ ಎಂಬ ಭಾರತೀಯ ಯೋಧನ ಅಂಗಾಂಗಗಳನ್ನು ಪಾಕಿಸ್ತಾನದ ಯೋಧರು ಕತ್ತರಿ ಹಾಕಿದ್ದರು. ಅಲ್ಲದೆ ಅವರ ಕತ್ತರಿಸಿದ ತಲೆಯನ್ನು ಕಾಲ್ಚೆಂಡಿನಂತೆ ಒದ್ದಿದ್ದರು. ಅದನ್ನು ನೆನಪಿಸಿಕೊಂಡರೆ ನನಗೆ ಇನ್ನೂ ನೋವಾಗುತ್ತದೆ. ಆದರೆ ಆಗ ಆಡಳಿತದಲ್ಲಿದ್ದ ಯುಪಿಎ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಎಂದಿನಂತೆ ಮೌನಿಯಾಗುಳಿದಿದ್ದರು ಎಂದು ಆರೋಪಿಸಿದರು.

ನಾನು ಕಳೆದ ನಾಲ್ಕೈದು ತಿಂಗಳಿನಿಂದ ದೇಶದ ಹಲವು ಕಡೆ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದೇನೆ. ಹೋದೆಡೆಯಲೆಲ್ಲ ಮೋದಿ, ಮೋದಿ ಎಂಬ ಕೂಗನ್ನೇ ಕೇಳಿದ್ದೇನೆ. ದೇಶದ ಬುದ್ಧಿವಂತ ಜನರು ಸರ್ವಾನುಮತದಿಂದ ಮೋದಿಯವರನ್ನು ಆಯ್ಕೆ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.