ಅಮಿತ್​ ಷಾ ದೇವರಲ್ಲ, ಮಮತಾ ಬ್ಯಾನರ್ಜಿ ದೇವತೆಯೂ ಅಲ್ಲ: ಶಿವಸೇನೆ

ಮುಂಬೈ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರನ್ನು ನೀವು ದೇವರಲ್ಲ ಎಂದು ಟೀಕಿಸಿದ್ದಾರೆ. ಅಂತೆಯೇ ಮಮತಾ ಸಹ ತಾವು ದೇವತೆಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಶಿವಸೇನೆ ತಿರುಗೇಟು ನೀಡಿದೆ.

ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ಅಮಿತ್​ ಷಾ ಅವರ ರೋಡ್​ ಶೋ ವೇಳೆ ಹಿಂಸಾಚಾರ ನಡೆದಿತ್ತು. ಈ ಘಟನೆಯ ನಂತರ ಬಿಜೆಪಿ ಮತ್ತು ಅಮಿತ್​ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ ಅವರು ಷಾ ದೇವರಲ್ಲ ಎಂದು ಟೀಕಿಸಿದ್ದರು. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಮಮತಾ ಬ್ಯಾನರ್ಜಿ ಟೀಕೆಗೆ ಪ್ರತ್ಯುತ್ತರ ನೀಡಿದೆ.

ಮಮತಾ ಬ್ಯಾನರ್ಜಿ ಸರ್ಕಾರ ಪ್ರಜಾಪ್ರಭುತ್ವ ವಿಧಾನದಲ್ಲಿ ಚುನಾಯಿತವಾಗಿದೆ. ಅವರು ಗೆಲುವು ಸಾಧಿಸಲಿದ್ದಾರೆ ಅಥವಾ ಸೋಲನುಭವಿಸಲಿದ್ದಾರೆ ಎಂಬುದನ್ನು ಮತದಾರರು ಪ್ರಜಾಪ್ರಭುತ್ವ ವಿಧಾನದಲ್ಲಿ ನಿರ್ಧರಿಸಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಷಾ ಅವರ ದಾರಿಗೆ ಅಡ್ಡ ನಿಂತು ಗೆಲುವು ಸಾಧಿಸಲು ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ನಾಯಕರ ಹೆಲಿಕಾಪ್ಟರ್​ಗಳು ಇಳಿಯಲು ಅನುಮತಿ ನಿರಾಕರಿಸಿದ್ದರಿಂದಲೇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್​ ನಡುವೆ ಸಂಘರ್ಷ ಹೆಚ್ಚಲು ಕಾರಣವಾಯಿತು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

ಎಡಪಕ್ಷಗಳ ಆಡಳಿತವಿದ್ದಾಗ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಪ್ರಕರಣಗಳು ಹೆಚ್ಚಿತ್ತು. ಈಗ ಮಮತಾ ಬ್ಯಾನರ್ಜಿ ಸಹ ಅದನ್ನೇ ಮುಂದುವರಿಸಿದ್ದಾರೆ. ಇದರ ಪರಿಣಾಮವನ್ನು ಪಶ್ಚಿಮ ಬಂಗಾಳ ಅನುಭವಿಸುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಎಂದು ಶಿವಸೇನೆ ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *