1999ರ ಸ್ಥಿತಿಯೇ ಮರಳಲಿದೆ

ಬೆಂಗಳೂರು: ವಿಧಾನಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಮೂರು ರಾಜ್ಯಗಳನ್ನು ಕಳೆದುಕೊಂಡಿದ್ದರೂ 1999ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂತೆ 2019ರ ಲೋಕಸಭೆಯಲ್ಲೂ ದೇಶದ ಜನರು ಕೈ ಹಿಡಿಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ನವದೆಹಲಿಯಲ್ಲಿ ಗುರುವಾರ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಘಟಕಗಳ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ರಾಜ್ಯ ಪ್ರಭಾರಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆವರೆಗೆ ನಡೆದ ಸಭೆಯಲ್ಲಿ ಪ್ರಮುಖವಾಗಿ ಜ.11-12ಕ್ಕೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿ, ಮೋರ್ಚಾಗಳ ರಾಷ್ಟ್ರೀಯ ಸಮಾವೇಶಗಳ ದಿನಾಂಕ, ಸ್ಥಳ ಹಾಗೂ ಭಾಗವಹಿಸುವ ಪ್ರಮುಖರ ಹೆಸರನ್ನು ರ್ಚಚಿಸಿ ಅಂತಿಮಗೊಳಿಸಲಾಗಿದೆ.

ಉದ್ಘಾಟನೆ ಹಾಗೂ ಸಮಾರೋಪದಲ್ಲಿ ಅಮಿತ್ ಷಾ ಮಾತನಾಡಿದ್ದಾರೆ. ಈ ಹಿಂದೆಯೇ ಸಭೆ ನಿಗದಿಯಾಗಿದ್ದರಿಂದ ಪಂಚರಾಜ್ಯಗಳ ಚುನಾವಣೆ ಅವಲೋಕನ ನಡೆಸುವುದು ಅಜೆಂಡಾದಲ್ಲಿ ಇರಲಿಲ್ಲ. ಆದರೂ ಅಮಿತ್ ಷಾ ಸೂಚ್ಯವಾಗಿ ಮಾತನಾಡಿದ್ದಾರೆ. 1998ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲನುಭವಿಸಿತ್ತು. ನಂತರ ಅಟಲ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಮೋರ್ಚಾಗಳ ಬಲವರ್ಧನೆ ಮಾಡುವ ಮೂಲಕ ಸಮಾಜದ ಎಲ್ಲ ವರ್ಗಗಳನ್ನೂ ತಲುಪಬೇಕು. ಕಾರ್ಯಕರ್ತರ ವ್ಯವಸ್ಥಿತ ಕಾರ್ಯದಿಂದ 2019ರ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತ ಗಳಿಸಲಿದ್ದೇವೆ ಎಂದು ಭರವಸೆಯ ಮಾತನ್ನಾಡಿದ್ದಾರೆ.

ಸೋಷಿಯಲ್ ಇಂಜಿನಿಯರಿಂಗ್​ಗೆ ಒತ್ತು: ಸಮಾಜದ ವಿಭಿನ್ನ ವರ್ಗಗಳ ನಾಡಿಮಿಡಿತವನ್ನು ಅರಿಯುವುದು 2019ರ ಚುನಾವಣೆ ಹಿನ್ನಲೆಯಲ್ಲಿ ಮುಖ್ಯ ಎಂದು ಅರಿತಿರುವ ಬಿಜೆಪಿ, ಪಕ್ಷದ 7 ಮೋರ್ಚಾಗಳ ರಾಷ್ಟ್ರೀಯ ಸಮಾವೇಶಗಳನ್ನು ಡಿ.15ರಿಂದ 2019ರ ಫೆಬ್ರವರಿವರೆಗೆ ಆಯೋಜಿಸಲು ನಿರ್ಧರಿಸಿದೆ.

ನವದೆಹಲಿಯಲ್ಲಿ ಜ.11-12ಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಪದಾಧಿಕಾರಿಗಳ ಜತೆಗೆ ಪಕ್ಷದ ಎಲ್ಲ ಜನಪ್ರತಿನಿಧಿಗಳೂ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿ ಜತೆಗೆ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಾಗಾರ ಹಾಗೂ ಉಳಿದ 6 ಮೋರ್ಚಾಗಳ ತಲಾ ಎರಡು ದಿನಗಳ ರಾಷ್ಟ್ರೀಯ ಅಧಿವೇಶನ ಕುರಿತು ರ್ಚಚಿಸಲಾಗಿದೆ. ಎಲ್ಲ ಮೋರ್ಚಾಗಳ ಜಿಲ್ಲೆ ಮೇಲ್ಪಟ್ಟ ಪದಾಧಿಕಾರಿಗಳಿಗೆ ನಿರ್ದಿಷ್ಟ ಕಾರ್ಯಸೂತ್ರ ನೀಡಲಾಗುತ್ತಿದ್ದು, ಅಧಿವೇಶನದಲ್ಲಿ ಹೆಚ್ಚಿನ ಯೋಜನೆ ಮಾಡಲು ನಿರ್ಧರಿಸಲಾಗಿದೆ.

ಅಧಿವೇಶನ ನಡೆಯುತ್ತಿರುವ ಕಾರಣ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಭಾಗಿಯಾಗಿರಲಿಲ್ಲ. ತಮಿಳುನಾಡು ಸಹ ಪ್ರಭಾರಿ ಸಿ.ಟಿ. ರವಿ, ಕೇರಳ ಸಹ ಪ್ರಭಾರಿ ನಳಿನ್​ಕುಮಾರ್ ಕಟೀಲು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *