ಗಾಂಧಿನಗರದಲ್ಲಿ ಅಮಿತೋತ್ಸಾಹ, ಬಿಜೆಪಿಗೆ ಗೆಲುವಿನ ದೃಢ ವಿಶ್ವಾಸ

| ಅಭಿಷೇಕ್ ಬಿ.ವಿ. ದಿಗ್ವಿಜಯ ನ್ಯೂಸ್

ಮೂರು ದಶಕಗಳಿಂದಲೂ ಗುಜರಾತ್ ಬಿಜೆಪಿಯ ಭದ್ರಕೋಟೆ. ಕಳೆದ ಬಾರಿ ಎಲ್ಲ 26 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ, ಈ ಬಾರಿ ಕೂಡ ಸಂಪೂರ್ಣ ಕೇಸರೀಕರಣ ಮಾಡಲೇಬೇಕೆಂದು ಹೊರಟಿದೆ. ಕೆಲ ಕ್ಷೇತ್ರಗಳಲ್ಲಿ ಪ್ರಬಲವಾದ ಪೈಪೋಟಿ ಒಡ್ಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಗಾಂಧಿನಗರ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರ. ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಆರು ಬಾರಿ ಇಲ್ಲಿಂದ ಸಂಸದರಾಗಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮೊದಲಬಾರಿಗೆ ಲೋಕಸಭಾ ಚುನಾವಣೆಯನ್ನು ಗಾಂಧಿನಗರದಿಂದ ಎದುರಿಸುತ್ತಿರುವುದರಿಂದ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಏ.23ರಂದು ಇಲ್ಲಿ ಮತದಾನ ನಡೆಯಲಿದೆ.

ಹೀಗಿದೆ ಕ್ಷೇತ್ರ: 1967ರಿಂದ 1989ರವರೆಗೆ ಕಾಂಗ್ರೆಸ್ ಹಾಗೂ ಜನತಾದಳದ ಪಾಲಾಗಿದ್ದ ಗಾಂಧಿನಗರ ಕ್ಷೇತ್ರ, 1989ರಿಂದ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಬಿಜೆಪಿಯಿಂದ ಶಂಕರ್ ಸಿಂಗ್ ವಾಘೇಲಾ 1989ರಲ್ಲಿ ಸಂಸದರಾಗಿ ಆಯ್ಕೆಯಾದರು. 1991ರಲ್ಲಿ ಆಡ್ವಾಣಿ, 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಇಲ್ಲಿಂದ ಸಂಸದರಾಗಿದ್ದರು. ನಂತರ, 98ರಿಂದ ಆಡ್ವಾಣಿ ಗಾಂಧಿನಗರವನ್ನು ಪ್ರತಿನಿಧಿಸಿದ್ದಾರೆ.

ಗುಜರಾತಿನ 26 ಲೋಕಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಮತದಾರರು ಇರುವುದು ಗಾಂಧಿನಗರದಲ್ಲೇ (19.21 ಲಕ್ಷ). ಇದು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಗಾಂಧಿನಗರ ಉತ್ತರ, ಕಲೋಲ್, ಸಾನಂದ್, ಘಾಟ್​ಲೋದಿಯಾ, ವೇಜಲ್​ಪುರ್, ನಾರನ್​ಪುರಾ ಮತ್ತು ಸಾಬರ್​ವುತಿ. ಈ ಪೈಕಿ 5 ಕ್ಷೇತ್ರಗಳನ್ನು ಬಿಜೆಪಿ ಹೊಂದಿದ್ದರೆ, ಗಾಂಧಿನಗರ ಉತ್ತರ ಮತ್ತು ಕಲೋಲ್ ‘ಕೈ’ ತೆಕ್ಕೆಯಲ್ಲಿವೆ.

ಮಹಿಳಾ ಸುರಕ್ಷತೆ: ‘ಗಾಂಧಿನಗರದಲ್ಲಿ ಮಹಿಳೆಯರು ನಡುರಾತ್ರಿ ಯಲ್ಲೂ ಹೆದರಿಕೆಯಿಲ್ಲದೆ ಸಂಚರಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕೆಲ ಗಲಭೆಗಳಾಗಿವೆ. ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಇದನ್ನು ಬಿಜೆಪಿ ಮೆಟ್ಟಿ ನಿಂತಿದೆ ಎನ್ನುತ್ತಾರೆ ಮಹಿಳೆಯರು.

ಆಡ್ವಾಣಿ ಬದಲಿಗೆ ಪುತ್ರಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ಆಡ್ವಾಣಿ ಅಭಿಪ್ರಾಯ ಕೇಳಿತ್ತು. ಅದಕ್ಕವರು ಸಮ್ಮತಿಸಲಿಲ್ಲ. ತನ್ನ ಬದಲಾಗಿ ಅಮಿತ್ ಷಾಗೆ ಟಿಕೆಟ್ ನೀಡಿದರೆ, ಅವರ ಗೆಲುವು ನಿಶ್ಚಿತ ಎಂದು ಅಭಿಪ್ರಾಯ ಪಟ್ಟಿದ್ದರಿಂದ, ಷಾ ಸ್ಪರ್ಧಿಸುತ್ತಿದ್ದಾರೆ.

| ರೀಟಾ ಪಟೇಲ್ ಮೇಯರ್, ಗಾಂಧಿನಗರ ಮಹಾನಗರಪಾಲಿಕೆ

ಅಮಿತ್ ಷಾ ಶಕ್ತಿಪ್ರದರ್ಶನ

ನಾಮಪತ್ರ ಸಲ್ಲಿಕೆಯ ವೇಳೆಯೇ ಭರ್ಜರಿ ರೋಡ್ ಷೋ ನಡೆಸುವ ಮೂಲಕ ಷಾ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ‘ರಾಷ್ಟ್ರಕ್ಕೆ ಸುರಕ್ಷತೆ ಮತ್ತು ಉತ್ತಮ ಭವಿಷ್ಯವನ್ನು ಎನ್​ಡಿಎ ಸರ್ಕಾರವೇ ಒದಗಿಸಬಲ್ಲದು. ಈ ಬಾರಿ ಕೇಂದ್ರದಲ್ಲಿ ಭಾರಿ ಬಹುಮತದಿಂದ ಸರ್ಕಾರ ರಚಿಸಲಿದ್ದೇವೆ. ಐವತ್ತು ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ಆಗಿವೆ. ಈ ಸಾಧನೆಯೇ ಬಿಜೆಪಿಗೆ ಶ್ರೀರಕ್ಷೆ’ ಎಂದು ಷಾ ಪ್ರಚಾರದಲ್ಲಿ ಹೇಳುತ್ತಿದ್ದಾರೆ.

ಬೂತ್ ಅಧ್ಯಕ್ಷರಾಗಿದ್ದ ಷಾ

1982ರಲ್ಲಿ ಗಾಂಧಿನಗರದಲ್ಲೇ ಷಾ ಬೂತ್​ವೊಂದರ ಅಧ್ಯಕ್ಷರಾಗಿದ್ದರು. ಆಡ್ವಾಣಿ ಗೆಲುವಿಗಾಗಿ ಶ್ರಮಿಸಿದ್ದ ಅವರು ಈಗ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಷಾ ಸೂಚನೆಯಂತೆ ಕಾರ್ಯಕರ್ತರು ಪ್ರತಿ ಬೂತ್​ನ ಮನೆ-ಮನೆಗೂ ತೆರಳಿ ಪ್ರಚಾರ ನಡೆಸಿದ್ದಾರೆ. ಈವರೆಗೆ 400ಕ್ಕಿಂತ ಅಧಿಕ ಗುಂಪುಸಭೆಗಳನ್ನು ನಡೆಸಲಾಗಿದೆ.

ಗುಜರಾತ್​ನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಗಲೀಕರಣ, ನಗರ ಸೌಂದಯೀಕರಣ ಮುಂತಾದ ಕೆಲಸಗಳಾಗಿವೆ. ಗಲಭೆಗಳು ಕೂಡ ತಗ್ಗಿವೆ.

| ಕೇತನ್ ಪಟೇಲ್​ಸ್ಥಳೀಯ ಬಿಜೆಪಿ ಮುಖಂಡ

ಕಾಂಗ್ರೆಸ್​ನಲ್ಲಿ ತಳಮಳ

ನಿವೃತ್ತ ಚುನಾವಣಾ ಮುಖ್ಯ ಆಯುಕ್ತ ಟಿ.ಎನ್.ಶೇಷನ್, ನಟ ರಾಜೇಶ್ ಖನ್ನಾ, ಮಾಜಿ ಡಿಜಿಪಿ ಪಿ.ಕೆ.ದತ್ತಾರಂಥ ದಿಗ್ಗಜರನ್ನು ಮುಂಚೆಲ್ಲ ಗಾಂಧಿನಗರದಿಂದ ಅಭ್ಯರ್ಥಿಗಳನ್ನಾಗಿಸಿದ್ದ ಕಾಂಗ್ರೆಸ್ ಈ ಬಾರಿ ಶಾಸಕ ಡಾ.ಸಿ.ಜೆ.ಚಾವ್ಡಾರನ್ನು ಷಾ ಎದುರು ಕಣಕ್ಕಿಳಿಸಿದೆ. ಆದರೆ, ಚಾವ್ಡಾ ಷಾರನ್ನು ಎದುರಿಸಬಲ್ಲರೆ ಎಂಬ ಅನುಮಾನ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರದ್ದು. ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಸ್ಪರ್ಧೆ ರೋಚಕವಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.