ಅಮಿತ್ ಷಾ ಜಾರಕಿಹೊಳಿ ಭೇಟಿ ಇಲ್ಲ

ಶಿವಮೊಗ್ಗ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಯಾವುದೇ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರೆ ಆಗ ನೋಡೋಣ ಎಂದು ಬಿಎಸ್​ವೈ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ತಾವು ದೆಹಲಿಗೆ ತುರ್ತಾಗಿ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಅಮಿತ್ ಷಾ ಅವರು ತುಮಕೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೆಹಲಿಗೆ ಬನ್ನಿ ಎಂದು ನನಗೆ ಸೂಚನೆ ನೀಡಿದ್ದರು. ಆದ್ದರಿಂದ ಹೋಗಿದ್ದೆ ಎಂದು ಹೇಳಿದರು.

ಶಾಸಕರು, ಸಂಸದರ ಸಭೆ: ಜ. 13 ಮತ್ತು 14ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಪಕ್ಷದ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಲೋಕಸಭಾ ಸದಸ್ಯರ ಸಭೆ ನಡೆಸಲಿದ್ದಾರೆ ಎಂದು ಬಿಎಸ್​ವೈ ತಿಳಿಸಿದರು.

ಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ. ಎರಡು ದಿನ ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರು ದೆಹಲಿಯಲ್ಲಿ ಇರಬೇಕಾಗುತ್ತದೆ. ಈಗಾಗಲೇ ಎಲ್ಲರಿಗೂ ಸೂಚನೆ ನೀಡಲಾಗಿದೆ.

ಫೆಬ್ರವರಿ ಅಂತ್ಯಕ್ಕೆ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.

ಐದು ಲಕ್ಷ ಪರಿಹಾರ ಕೊಡಿ: ಶಿವಮೊಗ್ಗ ಜಿಲ್ಲೆಯಲ್ಲಿ ಕೆಡಿಎಫ್ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಎಸ್​ವೈ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಇದುವರೆಗೆ ಕೆಡಿಎಫ್ ಭೀತಿ ಇರುವ ಸಾಗರ ತಾಲೂಕಿಗೆ ಭೇಟಿ ನೀಡಿಲ್ಲ, ಸಚಿವರ ಈ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ ಬಗ್ಗೆ ಸರ್ಕಾರ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.