ಎಲ್‌ ಕೆ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಮಿತ್‌ ಷಾ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಲೋಕಸಭಾ ಚುನಾವಣೆಗೆ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅರುಣ್ ಜೇಟ್ಲಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಷಾಗೆ ಸಾಥ್‌ ನೀಡುವ ಮೂಲಕ ಎನ್‌ಡಿಎನ ಶಕ್ತಿ ಪ್ರದರ್ಶನ ಮಾಡಿದರು.

ಕೇಂದ್ರ ಸಚಿವರು ಮತ್ತು ಎನ್‌ಡಿಎ ಮೈತ್ರಿಕೂಟದ ಇತರೆ ಪ್ರಮುಖ ನಾಯಕರು ಇಂದು ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆ ಮತ್ತು ರೋಡ್‌ ಶೋನಲ್ಲಿ ಪಾಲ್ಗೊಂಡರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಮಿತ್‌ ಷಾ, “ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಆಡ್ವಾಣಿಯಂತಹ ಹಿರಿಯ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿರುವುದಕ್ಕೆ ನನಗೆ ಆಶೀರ್ವಾದ ಸಿಕ್ಕಿದೆ. ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬ ವಿಷಯದ ಬಗ್ಗೆ ಮಾತ್ರ ಈ ಚುನಾವಣೆ ನಡೆಯಲಿದ್ದು, ಇದೇ ಪ್ರಶ್ನೆಯನ್ನು ನಾನು ಹಿಮಾಚಲದಿಂದ ಕನ್ಯಾಕುಮಾರಿ ಮತ್ತು ಕಂಪ್ರುಪ್‌ನಿಂದ ಗಾಂಧಿನಗರದ ಜನರಿಗೆ ಕೇಳಿದ್ದೇನೆ. ಇದಕ್ಕೆ ಸಿಕ್ಕಿದ ಉತ್ತರ ಮಾತ್ರ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ ಎಂದು ಹೇಳಿದರು.

ಉದ್ಧವ್‌ ಠಾಕ್ರೆ ಮಾತನಾಡಿ, ನಾನಿಲ್ಲಿರುವುದಕ್ಕೆ ಹಲವಾರು ಜನರು ಆಶ್ಚರ್ಯಗೊಂಡಿದ್ದಾರೆ. ಯಾವಾಗ ನಾವು ಒಟ್ಟಿಗೆ ಕುಳಿತುಕೊಳ್ಳುತ್ತೇವೋ ಆಗ ನಮ್ಮ ನಡುವಿನ ಸಮಸ್ಯೆ ಮತ್ತು ಅಸಮಾಧಾನವನ್ನು ಬಗೆಹರಿಸಿಕೊಳ್ಳುತ್ತೇವೆ. ಹಿಂದುತ್ವವೇ ನಮ್ಮ ಉಸಿರು. ಹಿಂದುತ್ವವಿಲ್ಲದೆಯೇ ನಾವು ಹೇಗೆ ಬದುಕಲು ಸಾಧ್ಯ ಎಂದು ಪ್ರಶ್ನಿಸಿದರು.

ಎನ್‌ಡಿಎ ಒಕ್ಕೂಟದಲ್ಲಿ ಪ್ರಧಾನಿ ಮೋದಿಯನ್ನು ಹೊರತುಪಡಿಸಿ ಅತ್ಯಂತ ಬಲಿಷ್ಠ ನಾಯಕರೆಂದರೆ ಅದು ಅಮಿತ್‌ ಷಾ. ಅವರೀಗ 1991 ರಿಂದಲೂ ಆರು ಭಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಲ್.ಕೆ ಆಡ್ವಾಣಿ ಅವರ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಷಾಗೆ ಬಿಜೆಪಿ ಟಿಕೆಟ್‌ ನೀಡಿದೆ. ರೋಷ್‌ ಶೋ ವೇಳೆ ಅಡ್ವಾಣಿ ಗೈರಾಗಿದ್ದರು.

ಗುಜರಾತ್‌ನ 26 ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತವಾಗಿ ಏ. 23ರಂದು ಚುನಾವಣೆ ನಡೆಯುತ್ತಿದ್ದು, ಏ. 4 ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದೆ. (ಏಜೆನ್ಸೀಸ್)