ಎನ್​ಡಿಎ ಬಲಪ್ರದರ್ಶನ

ಗಾಂಧಿನಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎನ್​ಡಿಎ ಬಲಪ್ರದರ್ಶನವಾಗಿದೆ.

ಲಾಲ್ ಕೃಷ್ಣ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್ ಷಾ ಶನಿವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರ ಜತೆಗೆ ಎನ್​ಡಿಎ ಪ್ರಮುಖ ಪಕ್ಷಗಳಾದ ಎಲ್​ಜೆಪಿ, ಅಕಾಲಿ ದಳ ಹಾಗೂ ಶಿವಸೇನೆ ಮುಖಂಡರು ಕೂಡ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಿದರು.

ಇತ್ತೀಚಿನವರೆಗೆ ಬಿಜೆಪಿ ಜತೆ ವೈಮನಸ್ಸು ಹೊಂದಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಖುದ್ದು ಹಾಜರಾಗಿ, ಅಸಮಾಧಾನಗಳು ಮುಗಿದ ಅಧ್ಯಾಯ. ಎರಡೂ ಪಕ್ಷಗಳಿಗೆ ಹಿಂದುತ್ವವೇ ಉಸಿರು. ಹೀಗಾಗಿ ನಮ್ಮೆಲ್ಲ ಗೊಂದಲ ಬಗೆಹರಿಸಿಕೊಂಡು ಒಟ್ಟಾಗಿದ್ದೇವೆ. ಮತ್ತೆ ಮೋದಿ ಪ್ರಧಾನಿ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದಿದ್ದಾರೆ. ಠಾಕ್ರೆ ನಿಲುವಿಗೆ ಉಳಿದ ಮೈತ್ರಿ ಪಕ್ಷಗಳು ಕೂಡ ಧ್ವನಿಗೂಡಿಸಿವೆ.

ಜತೆಯಾದ ಬಿಜೆಪಿ ಮಾಜಿ ಅಧ್ಯಕ್ಷರು: ಬಿಜೆಪಿ ಹಾಲಿ ಅಧ್ಯಕ್ಷ ಅಮಿತ್ ಷಾ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ, ಸಕ್ರಿಯ ರಾಜಕೀಯದಲ್ಲಿರುವ ಬಿಜೆಪಿಯ ಇಬ್ಬರೂ ಮಾಜಿ ಅಧ್ಯಕ್ಷರು ಜತೆಯಾದರು. ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಜತೆಗೆ ಹಿರಿಯ ಸಚಿವ ಅರುಣ್ ಜೇಟ್ಲಿ ಕೂಡ ಭಾಗವಹಿಸಿದ್ದರು. ಬಿಜೆಪಿ ವರಿಷ್ಠ ಆಡ್ವಾಣಿಗೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಒಗ್ಗಟ್ಟು ಪ್ರದರ್ಶನಕ್ಕೆ ಈ ತಂತ್ರ ರೂಪಿಸಲಾಗಿದೆ.

ಮೈತ್ರಿ ಪಕ್ಷಗಳನ್ನು ಜತೆಗೆ ಕರೆದುಕೊಂಡು ಹೋಗಲು ಬಿಜೆಪಿ ಸಾಕಷ್ಟು ಶ್ರಮವಹಿಸಿದೆ. ಭಾರತಕ್ಕೆ ಮೋದಿ ಹಾಗೂ ಬಿಜೆಪಿಗೆ ಷಾ ಅವರಂಥ ಸಮರ್ಥ ನಾಯಕತ್ವ ದೊರೆತಿದೆ.

| ರಾಮ್​ಲಾಸ್ ಪಾಸ್ವಾನ್, ಎಲ್​ಜೆಪಿ ಮುಖ್ಯಸ್ಥ

ಕಮಲಮಯ ಗಾಂಧಿನಗರ

ಗಾಂಧಿನಗರ ಕ್ಷೇತ್ರವು 1989ರ ಮುಂಚೆ ಕಾಂಗ್ರೆಸ್ ಕೈನಲ್ಲಿತ್ತು. ಆದರೆ 1989ರ ಬಳಿಕ ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಒಟ್ಟು 9 ಚುನಾವಣೆಗಳಲ್ಲಿ 6 ಬಾರಿ ಆಡ್ವಾಣಿ ಪ್ರತಿನಿಧಿಸಿದ್ದರೆ, ಒಮ್ಮೆ ರಾಜಕೀಯ ಮುತ್ಸದ್ದಿ ದಿ.ಅಟಲ್ ಬಿಹಾರಿ ವಾಜಪೇಯಿ ಕೂಡ ಸಂಸದರಾಗಿದ್ದರು. 2014ರಲ್ಲಿ ಆಡ್ವಾಣಿ 4 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.

ಸುಮಾರು 56 ಪಕ್ಷಗಳು ಸೇರಿಕೊಂಡು ಪ್ರತಿಪಕ್ಷಗಳ ಮಹಾಮೈತ್ರಿ ರಚನೆಯಾಗಿದೆ. ಆದರೆ ಆ ಪಕ್ಷಗಳು ಮಾನಸಿಕವಾಗಿ ಒಂದಾಗಿಲ್ಲ. ಅಷ್ಟಕ್ಕೂ ನಾವು ಮೋದಿ ಎಂಬ ನಾಯಕನನ್ನು ಹೊಂದಿದ್ದೇವೆ. ಪ್ರತಿಪಕ್ಷಗಳ ನಾಯಕ ಯಾರು? ಪ್ರತಿಯೊಬ್ಬರೂ ಪ್ರಧಾನಿ ಹುದ್ದೆಗೆ ಹೊಡೆದಾಡುವವರಾಗಿದ್ದಾರೆ.

| ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ

ಭರ್ಜರಿ ರೋಡ್​ಶೋ

ನಾಮಪತ್ರಕ್ಕೂ ಮುನ್ನ ಅಮಿತ್ ಷಾ ಸಾರ್ವಜನಿಕ ಸಭೆ ಹಾಗೂ ಭರ್ಜರಿ ರೋಡ್ ಶೋ ನಡೆಸಿದರು. ಕೇಂದ್ರ ಸಚಿವ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಜತೆ ಷಾ ರೋಡ್​ಶೋ ನಡೆಸಿದರು. ಗಾಂಧಿನಗರದ 5 ಕಿ.ಮೀ ರಸ್ತೆಗಳಲ್ಲಿ ರೋಡ್​ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ನೆರೆದಿದ್ದರು.

ದಲೈಲಾಮಾ ಅನುಯಾಯಿಗೆ ಟಿಕೆಟ್

ಜಮ್ಮು: ಜಮ್ಮು-ಕಾಶ್ಮೀರದ ಲಡಾಖ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ದಲೈಲಾಮಾ ಅನುಯಾಯಿ ಹಾಗೂ ಯುವ ಮುಖಂಡ ಜಾಮಿಯಾಂಗ್ ಸಿರಿಂಗ್ ನಾಮ್್ಯಾಲ್ ಅವರನ್ನು ಸ್ಪರ್ಧೆಗಿಳಿಸಿದೆ. 31 ವರ್ಷದ ಯುವಕ ಹಾಗೂ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿರುವುದು ಕಣಿವೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಲಡಾಖ್​ಗೆ ಸ್ವಾಯತ್ತ ಅಥವಾ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಗಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಕರ್ನಾಟಕದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ 28 ವರ್ಷದ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವುದು ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಾಲ್ ಕೃಷ್ಣ ಆಡ್ವಾಣಿ ಹಾಗೂ ವಾಜಪೇಯಿ ಪ್ರತಿನಿಧಿಸಿದ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಅವಕಾಶ ದೊರೆತಿರುವುದು ನನ್ನ ಪುಣ್ಯ. ನನ್ನ ಜೀವನದಿಂದ ಬಿಜೆಪಿಯನ್ನು ತೆಗೆದರೆ ನಾನು ಶೂನ್ಯ. ನಾನು ಏನನ್ನಾದರು ಕಲಿತಿದ್ದರೆ ಹಾಗೂ ದೇಶಕ್ಕೆ ಪ್ರತಿಯಾಗಿ ನೀಡಿದ್ದರೆ ಬಿಜೆಪಿಯೇ ಕಾರಣ. ಈಗ ನಾನು ಮೋದಿ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಮೋದಿ ಗೆಲ್ಲಿಸಬೇಕಿದೆ.

| ಅಮಿತ್ ಷಾ ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷ