ನವಭಾರತ ನಿರ್ವಣಕ್ಕೆ ಖರೆ ಬೇಕು ಇಂಥವರು..!

| ಉಮೇಶ್ ಕುಮಾರ್ ಶಿಮ್ಲಡ್ಕ

ಜಾರ್ಖಂಡ್ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ 2016ರಿಂದ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಅಮಿತ್ ಖರೆ ಅವರನ್ನು ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವಾಲಯ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ. ಈ ಬೆಳವಣಿಗೆ ಅವರನ್ನು ಮತ್ತೆ ಸುದ್ದಿಯ ಕೇಂದ್ರಬಿಂದುವನ್ನಾಗಿಸಿದೆ. ಲಾಲು ಪ್ರಸಾದ್ ಜೈಲು ಸೇರುವಂತಾದ 1990ರ ದಶಕದ 950 ಕೋಟಿ ರೂಪಾಯಿ ಮೊತ್ತದ ಮೇವು ಹಗರಣ ಬಯಲಿಗೆಳೆದ ದಿಟ್ಟ ಅಧಿಕಾರಿಯಾಗಿ ಅಮಿತ್ ಖರೆಯನ್ನು ಜನ ನೋಡುತ್ತಿರುವುದೇ ಅದಕ್ಕೆ ಕಾರಣ.

ಖರೆ ಬಿಹಾರ ಕೆಡರ್​ನ 1985ರ ಬ್ಯಾಚಿನ ಐಎಎಸ್ ಅಧಿಕಾರಿ. ಎರಡು ದಶಕದ ಹಿಂದೆ ರಾಷ್ಟ್ರೀಯ ಜನತಾದಳ(ಆರ್​ಜೆಡಿ) ಮುಖ್ಯಸ್ಥ ಲಾಲು ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ನಡೆದ ಮೇವು ಹಗರಣವನ್ನು ಇವರು ಬಯಲಿಗೆಳೆದಿದ್ದರು. ಪರಿಣಾಮ, ಮುಖ್ಯಮಂತ್ರಿ ಸ್ಥಾನಕ್ಕೆ ಲಾಲು ರಾಜೀನಾಮೆ ಕೊಟ್ಟು, ದಶಕಗಳ ಬಳಿಕ ಜೈಲು ಸೇರಬೇಕಾಗಿ ಬಂತು ಕೂಡ. ಮೇವು ಹಗರಣ ಬಯಲಿಗೆಳೆದ ಆ ಸಂದರ್ಭವನ್ನು ದ ಪ್ರಿಂಟ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, ಅದರ ಸಾರಾಂಶ ಹೀಗಿದೆ: ‘ಅದು 1996ರ ಜನವರಿ 27ರ ಚಳಿಗಾಲದ ಬೆಳಗ್ಗಿನ ಸಮಯ. ನಾನು ಮತ್ತು ಇತರೆ ಅಧಿಕಾರಿಗಳು ಚಾಯ್ಬಸಾದ ಹಳೇ ಬ್ರಿಟಿಷ್ ರಾಜ್ ಬಿಲ್ಡಿಂಗ್​ನ ಬದಿಗಿದ್ದ ಖಜಾನೆ ಮತ್ತು ಪಶುಸಂಗೋಪನಾ ಇಲಾಖೆ ಕಚೇರಿಗಳ ಮೇಲೆ ದಾಳಿ ನಡೆಸಿದೆವು. ಅಲ್ಲಿನ ದಾಖಲೆಗಳನ್ನು ಪರಿಶೀಲಿಸತೊಡಗಿದಾಗ ಅಕ್ಷರಶಃ ನಾನು ಬೆದರಿಹೋದೆ. ಎಲ್ಲ ರಸೀದಿಗಳಲ್ಲೂ ಒಂದೇ ಮೊತ್ತ (-ಠಿ;9.9 ಲಕ್ಷ) ದಾಖಲಾಗಿದ್ದು, ಅವೆಲ್ಲವನ್ನೂ ಒದಗಿಸಿದ್ದು ಒಬ್ಬನೇ ಪೂರೈಕೆದಾರನಾಗಿದ್ದ. ಅವು ಖೊಟ್ಟಿ ರಸೀದಿಗಳೆಂದು ಮೇಲ್ನೋಟಕ್ಕೇ ಗೊತ್ತಾಗಿಬಿಟ್ಟಿತ್ತು. ಕೂಡಲೇ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಅಧೀನ ಅಧಿಕಾರಿಗಳಿಗೆ ಕರೆ ಕಳುಹಿಸಿದೆ. ಕೂಡಲೇ, ಅವರೆಲ್ಲ ಕಚೇರಿ ಬಿಟ್ಟು ಓಡಿ ಹೋದರೆಂಬ ಮಾಹಿತಿ ಬಂತು. ಹೀಗಾಗಿ ಖುದ್ದು ನಾನೇ ಸಹೋದ್ಯೋಗಿಗಳ ಜತೆಗೆ ಕಚೇರಿಗೆ ಹೋದೆ. ಭಾರಿ ಪ್ರಮಾಣದ ನಗದು, ಬ್ಯಾಂಕ್ ಡ್ರಾಫ್ಟ್, ನಕಲಿ ಟ್ರೆಜರಿ ಬಿಲ್​ಗಳು ಅಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಅವರು ಆ ದಾಖಲೆಗಳನ್ನೆಲ್ಲ ಅಲ್ಲಿಂದ ಸಾಗಿಸುವ ಗಡಿಬಿಡಿಯಲ್ಲಾದ ಅವಾಂತರ ಅದು. ಪಶುಸಂಗೋಪನಾ ಇಲಾಖೆಗೆ ಸೇರಿದ ಎಲ್ಲ ಕಚೇರಿಗಳಿಗೂ ಬೀಗ ಹಾಕಲು ಆದೇಶಿಸಿದೆ. ಅಲ್ಲಿ ಬಹುದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂತು. ಅದಾಗಿ, ಸರಿ ಸುಮಾರು ಎರಡು ದಶಕಗಳ ನಂತರದಲ್ಲಿ ಹಗರಣಕ್ಕೆ ಸಂಬಂಧಿಸಿ ಅಪಾರಾಧಿಗಳಿಗೆ ಶಿಕ್ಷೆ ಆಗುತ್ತಿದೆ.

ಈಗ ಎಲ್ಲೇ ಹೋದರೂ ಜನ ಕೇಳುವ ಪ್ರಶ್ನೆಗಳಿವು – ನಿಮಗೆ ನೌಕರಿ ಕಳೆದುಕೊಳ್ಳುವ ಭೀತಿ ಇರಲಿಲ್ಲವೇ? ಕುಟುಂಬದ ಸುರಕ್ಷತೆ ಬಗ್ಗೆ ಆತಂಕ ಇರಲಿಲ್ಲವೇ? ಅಂದು ಇಂತಹ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಬಂದಿರಲಿಲ್ಲ. ಅಹಮದಾಬಾದ್​ನಲ್ಲಿ ಐಐಎಂ ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಎಸ್.ಸಿ.ಕುಚ್ಚಾಲ್ ಹೇಳುತ್ತಿದ್ದ – ‘ಲೆಕ್ಕಕ್ಕಿಂತ ಹೆಚ್ಚು ಯೋಚನೆಗಳನ್ನು ಮಾಡ್ತಾ ಕುಳಿತುಬಿಟ್ಟರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದು’ ಎಂಬ ಮಾತನ್ನು ಪಾಲಿಸಿದ್ದೆ. ನನ್ನ ಉದ್ಯೋಗ ಅಥವಾ ಕುಟುಂಬದ ಸುರಕ್ಷತೆ ಅಥವಾ ನನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತ ಕುಳಿತಿದ್ದರೆ ತನಿಖೆ ನಡೆಸುವ ತೀರ್ವನವನ್ನೂ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಹಾಗಾದರೆ ನಾನೇಕೆ ಈ ಕೆಲಸ ಮಾಡಿದೆ? ಬಹುತೇಕರು ನಾಗರಿಕ ಸೇವೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಸಂದರ್ಭದಲ್ಲಿ ‘ನವಭಾರತ’ ನಿರ್ವಿುಸುವ ಕನಸು ಕಂಡಿರುತ್ತೇವೆ. ಜಿಲ್ಲಾಧಿಕಾರಿಯಾಗಿ ಅದು ನನ್ನ ಕರ್ತವ್ಯ ಕೂಡ ಆಗಿತ್ತು. ಹಾಗಂತ ಅದನ್ನು ನಾನೊಬ್ಬನೇ ಮಾಡಿದೆ ಎಂದರ್ಥವಲ್ಲ. ಈ ಕಾರ್ಯಾಚರಣೆಯಲ್ಲಿ ಅನೇಕ ತೆರೆಮರೆಯ ಹೀರೋಗಳಿದ್ದಾರೆ. ಅಂದು ನನ್ನ ಜತೆಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಲಾಲ್ ಶ್ಯಾಮ ಚರಣ್​ನಾಥ್ ಸಹದೇವ್ ಅವಿರತವಾಗಿ ಖಜಾನೆ ದಾಖಲೆಗಳನ್ನು ಪರಿಶೀಲಿಸಿದರು. ಸಾದಾರ್​ನ ಎಸ್​ಡಿಒ ಫಿಡೆಲಿಸ್ ಟೊಪ್ಪೊ, ಸೆಕೆಂಡ್ ಆಫೀಸರ್ ವಿನೋದ್ ಚಂದ್ರ ಝಾ ಇವರು ಕೂಡ ನನ್ನಂತೆಯೇ ಅಪಾಯವನ್ನು ಮೈಮೇಲೆ ಎಳೆದುಕೊಂಡು ಕೆಲಸ ಮಾಡಿದ್ದರು. ಮಾಧ್ಯಮದವರು ನನ್ನನ್ನಷ್ಟೇ ದೇಶಕ್ಕೆ ಪರಿಚಯಿಸಿದರು.

ಹಲವು ವರ್ಷಗಳ ಹಿಂದೆ ನಾನು ಬುಡಕಟ್ಟು ಸಮುದಾಯ ಹೆಚ್ಚಿರುವ ಲತೇಹಾರ್​ನಲ್ಲಿ ಎಸ್​ಡಿಒ ಆಗಿದ್ದೆ. ಭಾರತ್ ಜೋಡೋ ಯಾತ್ರೆ ನಿಮಿತ್ತ ಅಲ್ಲಿಗೆ ಆಗಮಿಸಿದ್ದ ಬಾಬಾ ಆಮ್ಟೆ, ‘ಬಹಳ ಜನ ಪ್ರಾಮಾಣಿಕರು ನಮ್ಮೊಡನೆ ಇದ್ದಾರೆ. ಉತ್ತಮ ಕೆಲಸ ಆಗಬೇಕು ಎಂದರೆ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಬೇಕಷ್ಟೆ’ ಎಂದಿದ್ದರು. ಒಂದೊಮ್ಮೆ ಇದು ಸಾಧ್ಯವಾದರೆ, ಅದರ ಫಲಿತಾಂಶವೂ ಉತ್ತಮವಾದುದೇ ಆಗಿರುತ್ತದೆ. ನವಭಾರತ ನಿರ್ವಣದ ಕನಸು ನನಸಾಗುವುದಕ್ಕೆ ವೇದಿಕೆಯನ್ನೂ ಒದಗಿಸುತ್ತದೆ ಎಂಬ ಅಂಶ ಈ ಮೇವು ಹಗರಣದ ಮೂಲಕ ನನಗೆ ವೇದ್ಯವಾಯಿತು’ ಎಂದು ಬರೆದುಕೊಂಡಿದ್ದಾರೆ.

ಖರೆ ಆ ಸಂದರ್ಭದಲ್ಲಿ ಬಹಳ ಕಿರುಕುಳವನ್ನು ಅನುಭವಿಸಿದ್ದಾರೆ. ಈ ಹಗರಣ ಬಯಲಿಗೆ ಬರುತ್ತಿದ್ದಂತೆ ಸರ್ಕಾರ ಅವರನ್ನು ಬಿಹಾರ ಸ್ಟೇಟ್ ಲೆದರ್ ಕಾರ್ಪೆರೇಷನ್​ಗೆ ವರ್ಗಾವಣೆ ಮಾಡಿತ್ತು. 1997ರಲ್ಲಿ ತಂದೆ ಕಾಯಿಲೆ ಬಿದ್ದಾಗ ಅವರನ್ನು ಡಾಕ್ಟರ್ ಹತ್ರ ಕರೆದುಕೊಂಡು ಹೋಗಬೇಕಿತ್ತು. ಆಗ ಅವರಿಗೆ ಸಿಕ್ಕಿದ್ದ ರಜೆಯನ್ನೂ ಸರ್ಕಾರ ರದ್ದುಗೊಳಿಸಿ ವಾಪಸ್ ಕರೆಯಿಸಿಕೊಂಡಿತ್ತು. ಹೀಗಾಗಿ, ಅಂತಿಮ ಕ್ಷಣದಲ್ಲಿ ತಂದೆಯ ದರ್ಶನ ಪಡೆಯುವ ಭಾಗ್ಯವೂ ಅವರಿಗೆ ಸಿಕ್ಕಿರಲಿಲ್ಲ. ತಂದೆಯ ದೇಹಾಂತದ ಬಳಿಕವಷ್ಟೇ ಸರ್ಕಾರ ರಜೆಯನ್ನು ಮತ್ತೆ ಮಂಜೂರು ಮಾಡಿತ್ತು. ಇಷ್ಟಾಗ್ಯೂ, ತರುವಾಯ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿ ಯಾವುದೇ ಹುದ್ದೆ ತೋರಿಸಿರಲಿಲ್ಲ. ಕೊನೆಗೆ ಹಲವು ವರ್ಷಗಳ ಬಳಿಕ ಜಾರ್ಖಂಡ್​ಗೆ ವರ್ಗಾವಣೆಗೊಂಡರು. ಖರೆ ಪತ್ನಿ ನಿಧಿ ಖರೆ ಕೂಡ ಐಎಎಸ್ ಅಧಿಕಾರಿ. ಜಾರ್ಖಂಡ್​ನ ಕಾರ್ವಿುಕ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಖರೆ ರಾಜ್ಯ ಪ್ರಾಥಮಿಕ ಶಿಕ್ಷಣ ಕಾರ್ಯದರ್ಶಿಯಾಗಿ ಹಲವು ಅವಧಿ ಕೆಲಸ ಮಾಡಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲೂ ಕರ್ತವ್ಯ ನಿರ್ವಹಿಸಿದ್ದ ಅವರು, ವೇದ್ ಮರ್ವಾ ಜಾರ್ಖಂಡ್ ರಾಜ್ಯಪಾಲರಾಗಿದ್ದಾಗ ಅವರಿಗೆ ಪ್ರಿನ್ಸಿಪಲ್ ಸೆಕ್ರಟರಿಯಾಗಿದ್ದರು. ಈಗ ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವಾಲಯ ಕಾರ್ಯದರ್ಶಿಯಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ವಾರ್ತಾ ಮತ್ತು ಮಾಹಿತಿ ಪ್ರಸಾರ ಖಾತೆಯ ಹೊಣೆಗಾರಿಕೆಯನ್ನು ಕೆಲಸಕ್ಕಿಂತ ಹೆಚ್ಚು ವಿವಾದಕ್ಕೀಡಾಗುತ್ತಿರುವ ಸ್ಮೃತಿ ಇರಾನಿ ಅವರಿಂದ ಹಿಂಪಡೆದು, ಕ್ರೀಡಾ ಖಾತೆ ನೋಡಿಕೊಳ್ಳುತ್ತಿದ್ದ ರಾಜ್ಯವರ್ಧನ್ ಸಿಂಗ್ ರಾಠೋಡ್​ಗೆ ವಹಿಸಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ಹೊಸ ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಗಮನಸೆಳೆದವರು ರಾಠೋಡ್. ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಇರುವ ಕಾರಣ ಈ ಬದಲಾವಣೆ ಮಹತ್ವ ಪಡೆದುಕೊಂಡಿದೆ. ರಾಠೋಡ್-ಖರೆ ಜೋಡಿ ಮಾಹಿತಿ ಪ್ರಸಾರದ ಮೂಲಕ ಯಾವ ರೀತಿ ಮೋಡಿ ಮಾಡಲಿದೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *