ಅಮೀನಗಡ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಅಮೀನಗಡ: ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲವೆಂದು ಆರೋಪಿಸಿ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ವ್ಯಾಪಾರಸ್ಥರು ಅಮೀನಗಡ ಹೆಸ್ಕಾಂ ಕಚೇರಿಗೆ ದಿಢೀರನೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು.

ಎರಡ್ಮೂರು ದಿನಗಳಿಂದ ಯಾವುದೇ ಮುನ್ಸೂಚನೆ ನೀಡದೆ ಪಟ್ಟಣದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಮೇಲಿಂದ ಮೇಲೆ ವಿದ್ಯುತ್ ಕಟ್ ಮಾಡುತ್ತಿರುವುದರಿಂದ ವಿದ್ಯುತ್ ಚಾಲಿತ ಮಗ್ಗಗಳು, ಕಟ್ಟಿಗೆ ಕೊರೆಯುವ ಮಷಿನ್‌ಗಳು, ಹಿಟ್ಟಿನ ಗಿರಣಿಗಳು, ಮನೆಯಲ್ಲಿನ ಸ್ವಂತ ಬೋರ್‌ವೆಲ್‌ಗಳು ದುರಸ್ತಿಗೆ ಬರುತ್ತಿವೆ. ವಿದ್ಯುತ್ ನಿಲುಗಡೆಯಿಂದ ಝರಾಕ್ಸ್ ಸೆಂಟರ್‌ಗಳು, ಆಧಾರ್, ನೆಮ್ಮದಿ ಕೇಂದ್ರಗಳು, ಪಟ್ಟಣ ಪಂಚಾಯಿತಿ ತಂತ್ರಾಂಶಗಳಿಗೂ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಮೀನಗಡ ಹೆಸ್ಕಾಂ ಶಾಖಾಧಿಕಾರಿ ಅವಿನಾಶ, ಅಮೀನಗಡ ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಿಂದ ಗುಡೂರ, ಚಿತ್ತರಗಿ ಗ್ರಾಮಗಳಿಗೆ ಕ್ರಾಸಿಂಗ್ ಬರುತ್ತದೆ. ಮಳೆ, ಗಾಳಿ ಸಂದರ್ಭದಲ್ಲಿ ಮುಖ್ಯ ಲೈನ್ ತೆಗೆಯಲೇ ಬೇಕಾಗುತ್ತದೆ. ಇಲ್ಲದಿದ್ದರೆ ಪ್ರಾಣಾಪಾಯಗಳಾಗುವ ಸಂಭವವಿರುತ್ತದೆ. ಕಾರಣ ಕ್ರಾಸಿಂಗ್ ಬಂದಾಗ ವಿದ್ಯುತ್ ಸರಬರಾಜು ನಿಲ್ಲಿಸಿ, ಅದು ಪೂರ್ಣ ದುರಸ್ತಿಗೊಳ್ಳುವ ತನಕ ಸರಬರಾಜು ಮಾಡಲಾಗುವುದಿಲ್ಲ. ಹೀಗಾಗಿ ವಿದ್ಯುತ್ ವ್ಯತ್ಯಯವಾಗಿದೆ ಎಂದರು.

ಪ್ರತ್ಯೇಕ ಲೈನ್ ವ್ಯವಸ್ಥೆ ಬಗ್ಗೆ ಎಇಇ ಅವರ ಹತ್ತಿರ ಚರ್ಚಿಸಬೇಕು. ಅವರು ಸದ್ಯಕ್ಕೆ ಊರಿನಲ್ಲಿಲ್ಲ. ಬಂದ ನಂತರ ಚರ್ಚಿಸಿ ಪರಿಹರಿಸುತ್ತೇನೆ ಎಂದು ಶಾಖಾಧಿಕಾರಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್. ಬಂಡಿವಡ್ಡರ, ಪಪಂ ಉಪಾಧ್ಯಕ್ಷೆ ಸೋನುಬಾಯಿ ಲಮಾಣಿ, ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಸಂಗಪ್ಪ ತಳವಾರ, ಮನೋಹರ ರಕ್ಕಸಗಿ, ವ್ಯಾಪರಸ್ಥರಾದ ಮಹಾಂತೇಶ ಹಿರೇಮಠ, ಚನ್ನಪ್ಪ ಕುಂಬಾರ, ಚಂದ್ರು ಹುಬ್ಬಳ್ಳಿ, ರಾಘವೇಂದ್ರ ಇಲಾಳ, ಸೋಮು ನಾಲತವಾಡ, ರಾಮಣ್ಣ ಭಜಂತ್ರಿ, ಈರಪ್ಪ ಹೆಬ್ಬಾಳ, ಎಂ.ಎಂ. ಯರಗೇರಿ, ಆರ್.ಬಿ. ಕುಂಟೋಜಿ, ಮಲ್ಲಪ್ಪ ಕಲ್ಲೂರ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *