ಸಾವಿರಾರು ಪೊಲೀಸರ ಭದ್ರತೆ ನಡುವೆ ಭೀಮಾ ಕೋರೆಗಾಂವ್​ 201ನೇ ವಿಜಯೋತ್ಸವ

ಪುಣೆ/ ಮುಂಬೈ: ಭೀಮಾ ಕೋರೆಗಾಂವ್​ನ 201ನೇ ವಾರ್ಷಿಕ ವಿಜಯೋತ್ಸವಕ್ಕಾಗಿ ಇಂದು ಸಾವಿರಾರು ಮಂದಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಸ್ಮಾರಕದ ಬಳಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಕಳೆದ ಬಾರಿ 200ನೇ ವಿಜಯೋತ್ಸವದ ವೇಳೆ ಘರ್ಷಣೆ ಸಂಭವಿಸಿತ್ತು. ಆದರೆ, ಈ ಬಾರಿ ಅಂಥ ಯಾವುದೇ ದುರ್ಘಟನೆಗಳೂ ನಡೆಯದಂತೆ ಎಚ್ಚರ ವಹಿಸಿರುವ ಮಹಾರಾಷ್ಟ್ರ ಪೊಲೀಸರು ಸ್ಮಾರಕದ ಬಳಿ ಈಗಾಗಲೇ 5,000 ಪೊಲೀಸರನ್ನು ನಿಯೋಜಿಸಿದ್ದಾರೆ. ಅಲ್ಲದೆ, 1,200 ಹೋಮ್​ ಗಾರ್ಡ್​ಗಳು, 12 ಕ್ಷಿಪ್ರ ಕಾರ್ಯಾಚರಣಾ ಪಡೆ, ರಾಜ್ಯ ಮೀಸಲು ಪೊಲೀಸರನ್ನು ಬಂದೋಬಸ್ತ್​ ಕಾರ್ಯಕ್ಕೆ ಕಳುಹಿಸಲಾಗಿದೆ.

ಮಹಾರಾಷ್ಟ್ರದ ಪುಟ್ಟ ಹಳ್ಳಿಯಾಗಿರುವ ಭೀಮಾ ಕೋರೆಗಾಂವ್​ನಲ್ಲಿ 201 ವರ್ಷಗಳ ಹಿಂದೆ ಮೇಲ್ವರ್ಗದ ಪೇಶ್ವೆಗಳು ಮತ್ತು ತಳ ಸಮುದಾಯದ ಮಹಾರರ ನಡುವೆ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಪೇಶ್ವೆಗಳ ವಿರುದ್ಧ ಮಹಾರರು ಜಯಗಳಿಸಿದ್ದರು. ಇದರ ಜ್ಞಾಪಕಾರ್ಥವಾಗಿ ಭೀಮಾ ಕೋರೆಗಾಂವ್​ನಲ್ಲಿ ವಿಜಯ ಸ್ತಂಭ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ವಿಜಯೋತ್ಸವ ಆಚರಿಸುವುದು ವಾಡಿಕೆ. ಆದರೆ, ಕಳೆದ ವರ್ಷ 200ನೇ ವಿಜಯೋತ್ಸವದ ವೇಳೆ ಬಲಪಂಥೀಯ ಗುಂಪುಗಳು ಮತ್ತು ದಲಿತ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿ, ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪೊಲೀಸರು ಸೂಕ್ತ ಬಂದೋಬಸ್ತ್​ ಕಲ್ಪಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು.