ಹಿಂದಿ ಹೇರಿಕೆಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಬದಲಾವಣೆಗೆ ಕೇಂದ್ರ ನಿರ್ಧಾರ

ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆಯ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಕೆಲ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 20119ರ ಹೊಸ ಕರಡಿನ ಪ್ರಕಾರ ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯ ಜತೆಗೆ ಹಿಂದಿ ಮತ್ತು ಇಂಗ್ಲಿಷ್​ ಭಾಷೆಯನ್ನು 5ನೇ ತರಗತಿಯವರೆಗೂ ಕಡ್ಡಾಯವಾಗಿ ಕಲಿಯಬೇಕಿತ್ತು.

ಹಿಂದೆಯೇತರ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದ ಅನೇಕ ನಾಯಕರು ತ್ರಿಭಾಷ ಸೂತ್ರಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಏರುತ್ತಿದೆ ಎಂದು ಆರೋಪಿಸಿದ್ದಾರೆ. ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ಪಕ್ಷವೂ ಕೇಂದ್ರದ ನಿರ್ಧಾರದ ವಿರುದ್ಧ ಕಿಡಿಕಾರಿತ್ತು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷಗಳಾದ ಡಿಎಂಕೆ ಹಾಗೂ ಮಕ್ಕಳ್​ ನಿಧಿ ಮಯ್ಯಂ ಪಕ್ಷದ ಕಮಲ್​ ಹಾಸನ್​, ಹಿಂದಿ ಭಾಷೆ ಐಚ್ಛಿಕ ವಿಷಯವಾಗಿರಬೇಕೇ ಹೊರತು ಅದು ಕಡ್ಡಾಯವಾಗಬಾರದು. ಒಂದು ವೇಳೆ ಕಡ್ಡಾಯ ಮಾಡಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್​ ಮೂಲಕ ವಿರೋಧ ವ್ಯಕ್ತಪಡಿಸಿ, ಕಲಿಕಾ ಭಾಷೆಯು ನಮ್ಮ ಆಯ್ಕೆ ಆಗಬೇಕೆ ಹೊರತು, ಅದನ್ನು ಬಲವಂತವಾಗಿ ಹೇರಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂಬುದು ನನ್ನ ಭಾವನೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ‌ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಧ್ವನಿಗೂಡಿಸಿರುವ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ.ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಟ್ವೀಟ್​ ಮೂಲಕ ತಿಳಿಸಿದ್ದರು. (ಏಜನ್ಸೀಸ್​)