ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ; ಆಢಳಿತಾರೂಢ ಬಿಜೆಪಿಗೆ ಹೊಡೆತ

ಜೈಪುರ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಪೈಕಿ ರಾಜಸ್ಥಾನದಲ್ಲೂ ಆಢಳಿತಾರೂಢ ಬಿಜೆಪಿಗೆ ಮುಖಭಂಗವಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯು ಆಢಳಿತಾರೂಢ ಪಕ್ಷದ ವಿರುದ್ಧ ಮತ ಚಲಾಯಿಸುವ ತನ್ನ ಸಂಪ್ರದಾಯವನ್ನು ಉಳಿಸಿಕೊಂಡಂತೆ ಕಾಣಿಸುತ್ತಿದೆ.

ಡಿ. 7ರಂದು ನಡೆದಿದ್ದ ಚುನಾವಣೆ ಬಳಿಕ ಮತದಾನೋತ್ತರ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್‌ ಈ ಬಾರಿ ರಾಜಸ್ಥಾನದಲ್ಲಿ ಗದ್ದುಗೆ ಹಿಡಿಯುವ ಸೂಚನೆ ನೀಡಿತ್ತು. ಅದರಂತೆ ಮುಂಜಾನೆಯಿಂದಲೂ ಕಾಂಗ್ರೆಸ್‌ ನಿರಂತರ ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮವು ಮುಗಿಲು ಮುಟ್ಟಿದೆ.

200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೇವಲ 69 ಸ್ಥಾನಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ. ಉಳಿದಂತೆ ಬಿಎಸ್‌ಪಿ 6 ಮತ್ತು ಇತರರು 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 199 ಕ್ಷೇತ್ರಗಳಲ್ಲಿ 100ರ ಗಡಿ ದಾಟಲು ಕೂಡ ಬಿಜೆಪಿ ಪರದಾಡಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಾಜಸ್ಥಾನ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಸಚಿನ್‌ ಪೈಲಟ್‌, ಕಾಂಗ್ರೆಸ್‌ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿನ್‌ ಪೈಲಟ್‌, ಕಾಂಗ್ರೆಸ್‌ನಲ್ಲಿ ನಂಬಿಕೆಯಿಡುವ ಎಲ್ಲ ಪಕ್ಷಗಳೊಂದಿಗೂ ನಾನು ಸಂಪರ್ಕದಲ್ಲಿದ್ದೇನೆ. ಜನರ ತೀರ್ಪು ಬಿಜೆಪಿ ವಿರುದ್ಧ ಬಂದಿದೆ ಮತ್ತು ಬಿಜೆಪಿಯ ದುರಹಂಕಾರದ ಧೋರಣೆಯ ಆಡಳಿತಕ್ಕೆ ಭಾರಿ ಹೊಡೆತ ಬಿದ್ದಿದೆ. ನಮ್ಮ ಪಕ್ಷವು ನೈತಿಕ ಗೆಲುವು ಸಾಧಿಸಿದೆ. ನಾವು ನಿಶ್ಚಿತವಾಗಿಯೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ಕೂಡ ಸರ್ಕಾರ ರಚನೆಗೆ ಒಂದೇ ಮನಸ್ಸಿನ ಪಕ್ಷಗಳು ಮತ್ತು ನಾಯಕರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಹುಲ್​ಗೆ ರಾಜಸ್ಥಾನ ಉಡುಗೊರೆ

ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಇಂದಿಗೆ ಒಂದು ವರ್ಷವಾಗಿರುವ ಬೆನ್ನಲ್ಲೇ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ್ದು, ರಾಹುಲ್‌ ಅವರಿಗೆ ಇದಕ್ಕಿಂತ ಮಿಗಿಲಾದ ಯಾವುದೇ ಉಡುಗೊರೆ ಇರಲಾರದು. ಯಾರು ಯಾವ ಸ್ಥಾನ ಅಲಂಕರಿಸುತ್ತಾರೆ ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದೆ ಎಂದು ಹೇಳಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಅವರ ಸರ್ಕಾರವನ್ನು ಜನ ಈ ಬಾರಿ ತಿರಸ್ಕರಿಸಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತಕ್ಕೆ ಹೊಡೆತ ಬಿದ್ದಿದೆ. ರಾಜೇ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಜಸ್ವಂತ್‌ ಸಿಂಗ್ ಅವರ ಮಗ ಮನ್ವೇಂದ್ರ ಸಿಂಗ್‌ ವಿರುದ್ಧ ಜಲ್ರಾಪಟನ್‌ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಸಚಿನ್‌ ಪೈಲಟ್‌ 50 ಸಾವಿರ ಮತಗಳ ಅಂತರದಿಂದ ಟೊಂಕ್‌ನಲ್ಲಿ ಗೆಲುವು ಸಾಧಿಸಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ಓರ್ವ ಅಭ್ಯರ್ಥಿ ಮೃತಪಟ್ಟಿದ್ದರಿಂದ 199 ಕ್ಷೇತ್ರಗಳಿಗಷ್ಟೇ ಚುನಾವಣೆ ನಡೆದಿತ್ತು. (ಏಜೆನ್ಸೀಸ್)