ಪ್ರಧಾನಿ ಮೋದಿಗೆ ನಿರ್ದೇಶಿಸಿ ಎಂದು ಚುನಾವಣಾ ಆಯೋಗಕ್ಕೆ ವ್ಯಕ್ತಿಯೊಬ್ಬ ಬರೆದ ರಕ್ತದ ಪತ್ರದಲ್ಲೇನಿದೆ?

ಅಮೇಠಿ: ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ದೇಶಿಸುವಂತೆ ಅಮೇಠಿಯ ವ್ಯಕ್ತಿಯೊಬ್ಬ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾನೆ.

ರಕ್ತದಲ್ಲಿ ಪತ್ರ ಬರೆದಿರುವ ವ್ಯಕ್ತಿಯನ್ನು ಮನೋಜ್​ ಕಶ್ಯಪ್​ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ, ದಿವಂಗತ ರಾಜೀವ್​ ಗಾಂಧಿ ವಿರುದ್ಧ ನೀಡಿದ ಹೇಳಿಕೆಯಿಂದ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ.

ಮಾಜಿ ಪ್ರಧಾನಿ, ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರೇ ರಾಜೀವ್​ ಗಾಂಧಿ ಅವರನ್ನು ಲೇಖನವೊಂದರಲ್ಲಿ ಪ್ರಸಂಶಿಸಿದ್ದಾರೆ ಎಂದು ತಿಳಿಸಿರುವ ಕಶ್ಯಪ್​, ಯಾರು ರಾಜೀವ್​ ಗಾಂಧಿ ಅವರನ್ನು ಅವಮಾನಿಸುತ್ತಾರೋ ಅವರು ಅಮೇಠಿ ಜನರಿಗೆ ರಾಜೀವ್​ ಗಾಂಧಿರನ್ನು ಹತ್ಯೆ ಮಾಡಿದವರ ಮನೆತನದವರಂತೆ ಕಾಣುತ್ತಾರೆಂದು ಕಶ್ಯಪ್​ ಬರೆದಿದ್ದಾರೆ.

ಈ ಪತ್ರದಲ್ಲಿ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಇಲ್ಲಿರುವುದು ರಾಜೀವ್​ ಗಾಂಧಿ ಅವರೊಂದಿಗಿನ ಭಾವಾನಾತ್ಮಕ ಸಂಬಂಧವಷ್ಟೇ ಎಂದು ಸ್ಪಷ್ಟನೆಯನ್ನು ಕಶ್ಯಪ್​ ನೀಡಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಪ್ರಧಾನಿ ಮೋದಿ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ನಂ. 1 ಭ್ರಷ್ಟಾಚಾರಿಯಾಗಿಯೇ ಅಂತ್ಯಕಂಡರು ಎಂದು ಜರಿದಿದ್ದರು. ಹೀಗಾಗಿ ಕಶ್ಯಪ್​ ಅವರು ರಕ್ತದಲ್ಲಿ ಪತ್ರ ಬರೆದಿದ್ದು, ಪ್ರಧಾನಿ ಮೋದಿ ಅವರಿಗೆ ನಿರ್ದೇಶನ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಶ್ಯಪ್​ ಅವರು ರಕ್ತದಲ್ಲಿ ಬರೆದಿರುವ ಪತ್ರವನ್ನು ಕಾಂಗ್ರೆಸ್​ ಎಂಎಲ್​ಸಿ ದೀಪಕ್​ ಸಿಂಗ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *