ಬಾಹ್ಯಾಕಾಶದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿ, ವಿಫಲವಾಗಿದ್ದ ಅಮೆರಿಕದ ಮಹಿಳಾ ಗಗನಯಾನಿ ಅಭ್ಯರ್ಥಿ ಜೆತ್ರಿ ಕಾಬ್​ ಇನ್ನಿಲ್ಲ

ಫ್ಲೋರಿಡಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿ, ವಿಫಲರಾಗಿದ್ದ ಅಮೆರಿಕದ ಮೊದಲ ಮಹಿಳಾ ಬಾಹ್ಯಾಕಾಶಯಾನಿ ಅಭ್ಯರ್ಥಿ ಪೈಲಟ್​ ಜೆರಿ ಕಾಬ್​ (88) ನಿಧನರಾಗಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಗಿ ಕಾಬ್​ ಕುಟುಂಬದ ವಕ್ತಾರ ಮೈಲ್ಸ್​ ಓ ಬ್ರಿಯೆನ್​ ತಿಳಿಸಿದ್ದಾರೆ.

ಇವರು ಅಮೆರಿಕದ ಮೊದಲ ಮಹಿಳಾ ಬಾಹ್ಯಾಕಾಶಯಾನಿ ಅಭ್ಯರ್ಥಿಯಾಗಿದ್ದರು. ಆದರೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಲ್ಲಿನ ಸ್ತ್ರೀ ವಿರೋಧಿ ನಿಲುವಿನಿಂದಾಗಿ ಇವರಿಗೆ ಬಾಹ್ಯಾಕಾಶಯಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಂದು ಹತಾಶರಾಗಿ ಕುಳಿತುಕೊಳ್ಳದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ತ್ರೀಯರಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಹೋರಾಡಿದ್ದರು.

ಮೈಲ್ಸ್​ ಓ ಬ್ರಿಯೆನ್​ ಪ್ರಕಾರ, ಕಾಬ್​ ಅವರು 1961ರಲ್ಲಿ ಅಮೆರಿಕದ ಮರ್ಕ್ಯುರಿ 7 ಎಂಬ ಅತ್ಯಂತ ಕಠಿಣ ಬಾಹ್ಯಾಕಾಶಯಾನಿಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಇವರೊಂದಿಗೆ ಇನ್ನೂ 12 ಮಹಿಳೆಯರು ಕೂಡ ಈ ತರಬೇತಿಯನ್ನು ಪಡೆದುಕೊಂಡಿದ್ದರು. ಆದರೆ, ಆ ವೇಳೆಗಾಗಲೆ ಅಮೆರಿಕ ವಾಯುಪಡೆಯ ಜೆಟ್​ ಟೆಸ್ಟ್​ ಪೈಲಟ್​ಗಳು ಮರ್ಕ್ಯುರಿ 7 ಕಠಿಣ ತರಬೇತಿ ಪೂರೈಸಿ ಬಾಹ್ಯಾಕಾಶಕ್ಕೆ ತೆರಳಲು ಸನ್ನದ್ಧರಾಗಿದ್ದರು. ಮಿಲಿಟರಿ ಮೂಲದವರು ಎಂಬ ಕಾರಣಕ್ಕೆ ಇವರೆಲ್ಲರಿಗೂ ಆದ್ಯತೆ ದೊರೆತಿತ್ತು. ಹೀಗಾಗಿ ತರಬೇತಿ ಪೂರೈಸಿದ ಹೊರತಾಗಿಯೂ 13 ಮಹಿಳಾ ಬಾಹ್ಯಾಕಾಶಯಾನಿ ಅಭ್ಯರ್ಥಿಗಳಿಗೆ ಗಗನಯಾನ ಕೈಗೊಳ್ಳುವ ಅವಕಾಶ ದೊರೆಯಲಿಲ್ಲ.

ಇದರ ವಿರುದ್ಧ ಕಾಬ್​ ಹೋರಾಟ ಆರಂಭಿಸಿದರು. 1962ರಲ್ಲಿ ಅಮೆರಿಕದ ಸಂಸತ್​ನ ಸಮಿತಿ ಎದುರು ಹಾಜರಾಗಿ ಮಹಿಳಾ ಬಾಹ್ಯಾಕಾಶಯಾನಿ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ವಿವರಿಸಿದ್ದರು. ಯಾವುದೇ ತಾರತಮ್ಯ ಇಲ್ಲದೆ, ನಮ್ಮ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾದರಿಯಾಗಿ ನಿಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಇವರ ಮನವಿಗೆ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಹಾಗಾಗಿ ಮಹಿಳೆಯರಿಗೆ ಬಾಹ್ಯಾಕಾಶಕ್ಕೆ ತೆರಳುವ ಅವಕಾಶ ದೊರೆಯದೆ ಹೋಗಿತ್ತು.

ಇವರ ಹೋರಾಟದಿಂದ ಕೆರಳಿದ್ದ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕಾಬ್​ ಅವರನ್ನು ಬಾಹ್ಯಾಕಾಶ ಕಾರ್ಯಕ್ರಮದ ಕುರಿತು ಪ್ರಚಾರ ಮಾಡುವ ಸಲಹೆಗಾರ್ತಿಯಾಗಿ ನೇಮಿಸಿಕೊಂಡಿತ್ತು. ಈ ನೇಮಕಾತಿ ಆಗಿ ಒಂದು ವಾರ ಕಳೆಯುವಷ್ಟರಲ್ಲಿ, ಅವರನ್ನು ಕೆಲಸದಿಂದ ಕಿತ್ತಾಕಲಾಗಿತ್ತು. 1997ರಲ್ಲಿ ಪ್ರಕಟಿಸಿದ್ದ ತಮ್ಮ ಆತ್ಮಚರಿತ್ರೆಯಲ್ಲಿ ಕಾಬ್​, ನನ್ನ ದೇಶ, ನನ್ನ ಸಂಸ್ಕೃತಿ ಮಹಿಳೆಯರಿಗೆ ಗಗನಯಾನ ಕೈಗೊಳ್ಳಲು ಅವಕಾಶ ನೀಡದಿರಲು ನಿರ್ಧರಿಸಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಷ್ಯಾ ಮೊದಲು: ಮಹಿಳಾ ಬಾಹ್ಯಾಕಾಶಯಾನಿಗೆ ಗಗನಯಾನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ರಷ್ಯಾದ್ದಾಗಿದೆ. 1963ರಲ್ಲಿ ಈ ಸಾಹಸ ಮಾಡಿದ ರಷ್ಯಾ, ವ್ಯಾಲೆಂಟೀನಾ ಟೆರೆಸ್ಕೋವಾ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟಿತ್ತು. ಅಮೆರಿಕ 1983ರಲ್ಲಿ ಈ ಸಾಹಸ ಮಾಡಿತು. ಸ್ಯಾಲಿ ರೈಡ್​ ಬಾಹ್ಯಾಕಾಶಯಾನ ಕೈಗೊಂಡ ಅಮೆರಿಕದ ಮೊದಲ ಗಗನಯಾನಿ ಎಂಬ ಹೆಗ್ಗಳಿಕೆ ಪಡೆದುಕೊಂಡರು. (ಏಜೆನ್ಸೀಸ್​)

Leave a Reply

Your email address will not be published. Required fields are marked *