More

    ಬಡತನ ನಿರ್ಮೂಲನೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸರ್ಕಾರದ ಯೋಜನೆ ಅನುಷ್ಠಾನ

    ಕೋಲಾರ: ಬಡತನ ನಿರ್ಮೂಲನೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಆ್ಯಪ್ರೋ ಏಷಿಯನ್ ಮತ್ತು ಲ್ಯಾಟಿನ್ ಅಮೆರಿಕದ ಅಧಿಕಾರಿಗಳ ತಂಡ ಕೋಲಾರ ಹಾಗೂ ಮುಳಬಾಗಿಲಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

    ಇದಕ್ಕೂ ಮುನ್ನ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಂಡದ ಭೇಟಿಯ ಉದ್ದೇಶದ ಮಾಹಿತಿ ನೀಡಿದ ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ಅಧಿಕಾರಿ ಡಾ.ಚನ್ನದೊರೈ, ವಿದೇಶಾಂಗ ಮಂತ್ರಾಲಯ, ಕೇಂದ್ರ ಸರ್ಕಾರದ ಕಾರ್ಯಕ್ರಮದಡಿ 22 ರಾಷ್ಟ್ರಗಳ 28 ಪ್ರತಿನಿಧಿಗಳು 3 ತಿಂಗಳ ಅಧ್ಯಯನಕ್ಕೆ ಆಗಮಿಸಿದ್ದು, ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ, ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.

    ಜಿಲ್ಲಾಧಿಕಾರಿ ಜೆ.ಮಂಜುನಾಥ್ ಜಿಲ್ಲೆಯ ಭೌಗೋಳಿಕ, ಕೃಷಿ ಚಟುವಟಿಕೆ, ಜನಜೀವನದ ಸ್ಥೂಲ ಪರಿಚಯ ಮಾಡಿಕೊಟ್ಟರು.
    ಮೇಲ್ಮೈ ನೀರಿನ ಮೂಲವಿಲ್ಲದ ಜಿಲ್ಲೆಯಲ್ಲಿ ಬೋರ್‌ವೆಲ್‌ಗಳೇ ನೀರಿಗೆ ಆಧಾರ. ಬೆಂಗಳೂರಿನ ಬೇಡಿಕೆಯಲ್ಲಿ ಶೇ.40 ತರಕಾರಿಗಳನ್ನು ಜಿಲ್ಲೆಯಿಂದಲೇ ಪೂರೈಸಲಾಗುತ್ತದೆ. ವಿದೇಶಗಳಿಗೆ ಟೊಮ್ಯಾಟೊ ರಫ್ತು ಮಾಡಲಾಗುತ್ತದೆ ಎಂದರು.

    ಸ್ವಚ್ಛಭಾರತ್ ಅಭಿಯಾನದಡಿ 2017-18ನೇ ಸಾಲಿನಲ್ಲಿ ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿ ರಾಷ್ಟ್ರಪುರಸ್ಕಾರಕ್ಕೆ ಪಾತ್ರವಾಗಿದೆ. 156 ಗ್ರಾಪಂಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲಾ 5 ಎಕರೆ ಜಮೀನು ನೀಡಲಾಗಿದೆ ಎಂದರು.
    ನರೇಗಾದನ್ವಯ 36 ಲಕ್ಷ ಮಾನವ ದಿನ ಸೃಜಿಸಿ 171 ಕೋಟಿ ರೂ.ಖರ್ಚು ಮಾಡಲಾಗಿದೆ. ಜಲಸಂರಕ್ಷಣೆಗಾಗಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಹಿಪ್ಪುನೇರಳೆ ತೋಟ ವಿಸ್ತರಣೆ, ದನಗಳ ದೊಡ್ಡಿ ನಿರ್ಮಾಣ, ಸರ್ವಋತು ರಸ್ತೆ, ಅರಣ್ಯೀಕರಣ ನಡೆಸಲಾಗಿದೆ ಎಂದರು.
    ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳೆಯರ ಆರ್ಥಿಕ ಸಬಲೀಕರಣ, ಪಿಎಂಎವೈ ಯೋಜನೆಯಡಿ ವಸತಿ ನಿರ್ಮಾಣಕ್ಕೆ ನೆರವು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಕೆಸಿ ವ್ಯಾಲಿ ಯೋಜನೆಯಡಿ ಈವರೆಗೆ 47 ಕೆರೆ, ಚೆಕ್‌ಡ್ಯಾಂ ತುಂಬಿದೆ. ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಜಿಲ್ಲೆ ರೇಷ್ಮೆ, ಹಾಲು, ಟೊಮ್ಯಾಟೊಗೆ ಪ್ರಸಿದ್ಧವಾಗಿದೆ. ಹನಿ ನೀರಾವರಿ ಅಳವಡಿಸಿ ಹಣ್ಣು, ತರಕಾರಿ ಬೆಳೆದು ರೈತರು ಮಾದರಿಯಾಗಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಿ ನಿಮ್ಮ ರಾಷ್ಟ್ರಗಳಲ್ಲಿ ಅನುಷ್ಠಾನಗೊಳಿಸಿ ಎಂದು ಸಲಹೆ ನೀಡಿದರು.
    ಸಂವಾದದಲ್ಲಿ ರೈತರಿಗೆ ಸರ್ಕಾರದ ಸೌಲಭ್ಯ, ಗ್ರಾಪಂ, ತಾಪಂ, ಜಿಪಂಗೆ ಚುನಾವಣೆ ಪ್ರಕ್ರಿಯೆ, ಸರ್ಕಾರದ ಯೋಜನೆಗಳಲ್ಲಿ ಜನಸಮುದಾಯದ ಸಹಭಾಗಿತ್ವ, ವಸತಿ ಯೋಜನೆ ಅನುಷ್ಠಾನ, ತ್ಯಾಜ್ಯ ಸಂಗ್ರಹಣೆ ಕುರಿತ ಸಂದೇಹಗಳನ್ನು ಪ್ರತಿನಿಧಿಗಳು ಬಗೆಹರಿಸಿಕೊಂಡರು.

    ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಉಪಕಾರ್ಯದರ್ಶಿ ಸಂಜೀವಪ್ಪ ಜಂಟಿ ಕೃಷಿ ನಿದೇಶಕ ಡಾ. ಎಚ್.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts