ಭಾರತಕ್ಕೆ ಟ್ರಂಪ್ ವಾರ್ನಿಂಗ್

ವಾಷಿಂಗ್ಟನ್: ಇರಾನ್​ನಿಂದ ತೈಲ ಆಮದು ಹಾಗೂ ರಷ್ಯಾದ ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ನವೆಂಬರ್ 1ರಿಂದ ಯಾವುದೆ ದೇಶ ಇರಾನ್​ನಿಂದ ತೈಲ ಆಮದು ಮುಂದುವರಿಸಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದಿರುವ ಟ್ರಂಪ್, ತೈಲ ಆಮದು ನಿಲ್ಲಿಸುವುದರಿಂದ ಆಗುವ ಸಮಸ್ಯೆಗಳನ್ನು ಅಮೆರಿಕ ಬಗೆಹರಿಸಲಿದೆ ಎಂದಿದ್ದಾರೆ.

ಇರಾನ್​ನಿಂದ ತೈಲ ಆಮದು ಮುಂದುವರಿಸಲು ಭಾರತ ಹಾಗೂ ಚೀನಾ ನಿರ್ಧರಿಸಿವೆ. ಹೀಗಾಗಿ ಅಮೆರಿಕ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕಳೆದ 4 ತಿಂಗಳಿಂದ ಕಚ್ಚಾತೈಲ ಆಮದು ಪ್ರಮಾಣ ಕಡಿಮೆ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರುಗತಿಯಲ್ಲಿ ಸಾಗುತ್ತಿರುವಾಗಲೇ ಅಮೆರಿಕ ನೀಡಿರುವ ಎಚ್ಚರಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಚುನಾವಣೆ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ನಿರ್ಬಂಧ ನಿರ್ಧಾರ ಶೀಘ್ರ

ರಷ್ಯಾದಿಂದ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದಕ್ಕೆ ಭಾರತ ಸಹಿ ಹಾಕುವಾಗ ಅಮೆರಿಕ ಮೃಧು ಧೋರಣೆ ತಾಳಿದೆ ಎನ್ನಲಾಗಿತ್ತು. ಆದರೆ ಈಗ ಟ್ರಂಪ್ ಉಲ್ಟಾ ಹೊಡೆದಿದ್ದು, ‘ನಿಮ್ಮ ನಿರೀಕ್ಷೆಗೂ ಮೊದಲು ನನ್ನ ನಿರ್ಧಾರ ಹೊರಬೀಳಲಿದೆ. ಏನಾಗುತ್ತದೆಂದು ಕಾದು ನೋಡಿ’ ಎಂಬ ಉತ್ತರವನ್ನು ನೀಡಿದ್ದಾರೆ. ಮಿತ್ರ ರಾಷ್ಟ್ರ ಭಾರತದ ಮೇಲೆ ನಿರ್ಬಂಧ ಹೇರುವ ಸುಳಿವನ್ನು ಅವರು ನೀಡಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *