ಉನ್ನತ ವ್ಯಾಸಂಗಕ್ಕೆ ಅಮೆರಿಕ ಉತ್ತಮ

ಮೂವತ್ತು ವರ್ಷಗಳ ಹಿಂದೆ ವರ್ಜಿನಿಯಾದ ಅದೊಂದು ಆಹ್ಲಾದಕರ ಸಂಜೆ ನಾನು ನನ್ನ ಜೀವಮಾನದ ಗೆಳೆಯನನ್ನು ಭೇಟಿಯಾದೆ. ನೂರಾರು ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿದ್ದ ಕಾಲೇಜು ಕ್ಯಾಂಪಸ್​ನಲ್ಲಿ ಕೋರ್ಸ್​ಗಳಿಗೆ ನೋಂದಣಿ ಮಾಡಿಸಲು ನಮ್ಮ ದಾರಿ ಹುಡುಕುತ್ತಿದ್ದೆವು. ಅದೊಂದು ಬಗೆಯ ಆತಂಕ, ಖುಷಿ ಎರಡೂ ಒಟ್ಟೊಟ್ಟಿಗೆ ಅನುಭವಿಸುತ್ತಿದ್ದ ಹೊತ್ತು ಅದು. ಕಾಲೇಜ್ ಆಫ್ ವಿಲಿಯಂ ಅಂಡ್ ಮೇರಿಯಲ್ಲಿ ಓದು ಆರಂಭಿಸಿದಾಗ, ಅಲ್ಲಿನ ಸಹಜ ಸೌಂದರ್ಯ ಮತ್ತು ಶೈಕ್ಷಣಿಕ ಔನ್ನತ್ಯಗಳು ನನ್ನನ್ನು ಮಂತ್ರಮುಗ್ಧವಾಗಿಸಿದವು, ಹಾಗೆಯೇ ಮುಂದಿರುವ ಅಗಾಧ ಸಾಧ್ಯತೆಗಳು ನನ್ನನ್ನು ವಿನೀತನನ್ನಾಗಿಸಿದವು.

ಆ ರಾತ್ರಿ ನನ್ನ ಜೀವನಕ್ಕೆ ಕಾಲಿಟ್ಟ ಹೊಸಗೆಳೆಯ, ಜಗತ್ತಿನೆಲ್ಲೆಡೆ ಇರುವ ನನ್ನ ಕುಟುಂಬದ ಭಾಗವಾಗಿಬಿಟ್ಟ. ಅದೇ ನವೆಂಬರ್ ನಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದ ಪುಟಾಣಿ ಟಿವಿಯ ಸುತ್ತ ನೆರೆದು ಬರ್ಲಿನ್ ಗೋಡೆ ಉರುಳುವುದನ್ನು ನೋಡಿದೆವು. ಜತೆಯಾಗಿ ರಾಜಕೀಯ ಚರ್ಚೆ ನಡೆಯುವ ಗುಂಪುಗಳು, ಶೈಕ್ಷಣಿಕ, ಮತ್ತು ಸಾಮಾಜಿಕ ಕ್ಲಬ್​ಗಳಲ್ಲಿ ಭಾಗವಹಿಸಿದೆವು. ರಾಜತಾಂತ್ರಿಕರಾಗಿ, ಉದ್ಯಮಿಗಳಾಗಿ, ವಕೀಲರಾಗಿದ್ದೇವೆ. ನಮ್ಮಲ್ಲಿ ಕೆಲವರು ಐತಿಹಾಸಿಕ ಸವಾಲುಗಳು ಮತ್ತು ಅಗಾಧ ಅವಕಾಶಗಳನ್ನು ಹೊಂದಿರುವ ಹೊಸ ಪೀಳಿಗೆಯ ಮಕ್ಕಳಿಗೆ ತಂದೆತಾಯಿಯಾಗಿದ್ದೇವೆ.

ಹೈಸ್ಕೂಲ್​ನ ಡಿಪ್ಲೊಮಾ ಹೊಂದಿದ್ದ ನನ್ನ ತಾತ ವ್ಯಾಪಾರದಲ್ಲಿ ತುಂಬ ಯಶಸ್ಸು ಪಡೆದರು. ಅವರ ಯಶಸ್ಸು ಸಾಧ್ಯವಾಗಿದ್ದು ಅವರ ಅಕೌಂಟಿಂಗ್​ನಲ್ಲಿನ ಕೌಶಲ ಮತ್ತು ಕುಟುಂಬದ ಉನ್ನತಿಗಾಗಿ ದುಡಿಯಬೇಕೆನ್ನುವ ಅಗಾಧ ತುಡಿತದಿಂದಾಗಿ. ನಮ್ಮ ಕುಟುಂಬದಲ್ಲಿ ಅಪ್ಪ ಮತ್ತು ಅವರ ಸೋದರಿ ಕಾಲೇಜು ಮೆಟ್ಟಿಲೇರಿದ ಮೊದಲಿಗರು. ನನ್ನ ವೃತ್ತಿ ಬದುಕಿನ ಯಶಸ್ಸಿಗೆ ಅಡಿಪಾಯ ಹಾಕಿದ್ದು ನಾನು ವಿಶ್ವವಿದ್ಯಾಲಯದಲ್ಲಿ ಪಡೆದ ಶಿಕ್ಷಣವೇ. ಇಪ್ಪತ್ತು ವರ್ಷಗಳ ಕಾಲ ಅಮೆರಿಕದ ರಾಜತಾಂತ್ರಿಕನಾಗಿ ಕುಟುಂಬದೊಂದಿಗೆ ಜಗತ್ತು ಸುತ್ತಿರುವೆ. ಹಲವು ದೇಶಗಳನ್ನು ಹತ್ತಿರದಿಂದ ಕಂಡ ನನಗೆ ಶಿಕ್ಷಣಕ್ಕೆ ಅಮೆರಿಕಕ್ಕಿಂತಲೂ ಒಳ್ಳೆಯ ಜಾಗ ಮತ್ತೊಂದಿಲ್ಲ ಎಂಬ ನಂಬುಗೆ ಇನ್ನಷ್ಟು ಗಟ್ಟಿಯಾಗಿದೆ. ನನ್ನ ಮಗ ಫಿಲಿಡೆಲ್ಪಿಯಾದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾನೆ. ಇದೇ ವರ್ಷ ನನ್ನ ಮಗಳು ತನ್ನ ಮುಂದಿನ ಓದಿಗಾಗಿ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದಾಳೆ.

ಹತ್ತು ಲಕ್ಷಕ್ಕಿಂತಲೂ ಅಧಿಕ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂಜಿನಿಯರಿಂಗ್, ಫೈನ್ ಆರ್ಟ್ಸ್, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ಹಲವು ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಮುಗಿಸಿದ ಅನೇಕರು ಹಿಂದಿರುಗಿ ತಮ್ಮ ಕುಟುಂಬದ ಜತೆಗೂಡುತ್ತಾರೆ, ತಮ್ಮದೇ ಉದ್ಯಮಗಳನ್ನುಆರಂಭಿಸುತ್ತಾರೆ ಇಲ್ಲವೇ ತಮ್ಮ ಊರು, ದೇಶ ಮತ್ತು ಅಲ್ಲಿನ ಸಂಸ್ಥೆಗಳ ಉನ್ನತಿಗೆ ಶ್ರಮಿಸುತ್ತಾರೆ. ಇನ್ನೂ ಕೆಲವರು ಅಮೆರಿಕದಲ್ಲಿಯೇ ನೆಲೆಸಿ ಅವರ ಶಿಕ್ಷಣ ಮುಂದುವರಿಸಿ ಉದ್ಯೋಗ ಮಾಡುತ್ತಾ ತಮ್ಮ ಕೌಶಲಗಳಿಂದ ನಮ್ಮ ಸಮುದಾಯಗಳಿಗೆ ಉತ್ತಮ ಕೊಡುಗೆ ನೀಡುತ್ತಾರೆ.

ಅಮೆರಿಕದಲ್ಲಿ ಓದುವ ಆರು ಮಂದಿಯಲ್ಲಿ ಒಬ್ಬ ವಿದ್ಯಾರ್ಥಿ ಭಾರತೀಯ. ನಮ್ಮ ದೇಶಗಳ ನಡುವಿನ ಸಹಭಾಗಿತ್ವ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ. ಅಗಾಧ ಭರವಸೆ ಹಾಗೂ ಗಂಡಾಂತರಗಳನ್ನು ಏಕಕಾಲದಲ್ಲಿ ಎದುರಿಸುತ್ತಿರುವ ಈ ಜಗತ್ತಿಗೆ ಪ್ರತಿಭಾನ್ವಿತ ಜಾಗತಿಕ ಪ್ರಜೆಗಳ ಅಗತ್ಯವಿದೆ, ಹಾಗಾಗಿಯೇ ವಿಶ್ವದ ಅತ್ಯುತ್ತಮ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕಿದೆ.

ನೀವೂ ಆಸಕ್ತರೆ?

ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ನೀವೂ ಒಬ್ಬರಾಗಬೇಕೆ? ಹಾಗಿದ್ದರೆ ನಮ್ಮ EducationUSA ಸಲಹೆಗಾರರ ಜತೆ ರ್ಚಚಿಸಿ, ನಮ್ಮ ಸ್ಟೂಡೆಂಟ್ ವೀಸಾ ಪ್ರೆಸೆಂಟೇಶನ್​ಗಳಲ್ಲಿ ಭಾಗವಹಿಸಿ,4,500ಕ್ಕೂ ಹೆಚ್ಚು ಅಕ್ರೆಡಿಟೆಡ್ ಶೈಕ್ಷಣಿಕ ಸಂಸ್ಥೆಗಳ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. ಅಮೆರಿಕದಲ್ಲಿ ಶಿಕ್ಷಣ ಪಡೆಯಲು ನಿರ್ಧರಿಸಿದರೆ, ನಿಮ್ಮ ಜೀವನ ಪಯಣದಷ್ಟೇ ಆಸಕ್ತಿದಾಯಕ ಹಾಗೂ ಶ್ರೀಮಂತ ಅನುಭವಹೊಂದಿರುವ ಜೀವಮಾನ ಪರ್ಯಂತ ಜತೆಯಾಗಿರುವ ಸ್ನೇಹ ವಲಯವನ್ನು ಹೊಂದುತ್ತೀರಿ ಎಂಬ ವಿಶ್ವಾಸ ನನಗಿದೆ.

(ಲೇಖಕರು ಕಾನ್ಸುಲಾರ್ ಚೀಫ್, ಕಾನ್ಸುಲೇಟ್ ಜನರಲ್ ಇನ್ ಚೆನ್ನೈ.)

Leave a Reply

Your email address will not be published. Required fields are marked *