ಲೋಟಸ್ ಕಂಪನಿ ವಿರುದ್ಧ ದೂರು

ಅಮೀನಗಡ: ಸಮೀಪದ ಐತಿಹಾಸಿಕ ಐಹೊಳೆಯಲ್ಲಿ ಲೋಟಸ್ ಕಂಪನಿ ಸಿಬ್ಬಂದಿ ಗ್ರಾಮದ ಮ್ಯಾಗೋಟಿ ಓಣಿ ಜನರ ಮೇಲೆ ಮಾಡುತ್ತಿರುವ ದಬ್ಬಾಳಿಕೆ ತಪ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಅಮೀನಗಡ ಪೊಲೀಸ್ ಠಾಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಐಹೊಳೆ ಗ್ರಾಮದ ಮ್ಯಾಗೋಟಿ ಓಣಿಯಲ್ಲಿ ಲೋಟಸ್ ಕಂಪನಿ ಐಶಾರಾಮಿ ರೆಸಾರ್ಟ್ ಕಟ್ಟುತ್ತಿದ್ದು, ಸಾರ್ವಜನಿಕ ಸ್ಥಳ ಅತಿಕ್ರಮಣ ಮಾಡುತ್ತಿದೆ. ಪ್ರಶ್ನಿಸಿದರೆ ಗ್ರಾಮಸ್ಥರ ವಿರುದ್ಧ ದಬ್ಬಾಳಿಕೆ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿ ನಮ್ಮನ್ನು ಹೆದರಿಸುತ್ತಿದೆ. ನಮಗೆ ರಕ್ಷಣೆ ನೀಡಿ ಎಂದು ಒತ್ತಾಯಿಸಿದರು.

ಐಹೊಳೆ ಸ್ಥಳಾಂತರ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಕುರಿ ಮಾತನಾಡಿ, ಹುಬ್ಬಳ್ಳಿಯ ಲೋಟಸ್ ಕಂಪನಿ ಖರೀದಿಸಿದ ಜಾಗಕ್ಕಿಂತ ಹೆಚ್ಚು ಸ್ಥಳ ಅತಿಕ್ರಮಣ ಮಾಡಲು ಹಲವು ಪ್ರಭಾವಿಗಳ ಮೂಲಕ ಒತ್ತಡಗಳನ್ನು ಹಾಕುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಬಯಲು ಜಾಗ ಅತಿಕ್ರಮಣ ಮಾಡುತ್ತಿದೆ. ನಿತ್ಯ ದೈನಂದಿನ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಒಂದು ಮುಖ್ಯ ಪ್ರಕರಣ ತನಿಖೆಗಾಗಿ ಬೇರೆಡೆ ಬಂದಿದ್ದೇನೆ. ಠಾಣೆಗೆ ಮರಳಿ ಬಂದ ಮೇಲೆ ಸಮಸ್ಯೆ ಬಗೆಹರಿಸುವುದಾಗಿ ಠಾಣಾಧಿಕಾರಿ ಲಕ್ಷ್ಮೀಕಾಂತ ಬಾನಿಕೋಲ ದೂರವಾಣಿಯಲ್ಲಿ ತಿಳಿಸಿದ್ದರಿಂದ ನಿವಾಸಿಗಳು ಗ್ರಾಮಕ್ಕೆ ಹಿಂತಿರುಗಿದರು.

ಐಹೊಳೆಯ ಮ್ಯಾಗೋಟಿ ಓಣಿಯ ಈರಯ್ಯ ವಸ್ತ್ರದ, ಎಸ್.ವಿ. ಮುಚಖಂಡಿಮಠ, ಎಸ್.ಬಿ. ಕುರಿ, ಬಿ.ಎಸ್. ಮುಚಖಂಡಿಮಠ, ಎಲ್.ಕೆ. ತಳವಾರ, ದೇವಪ್ಪ ಆಸಂಗಿ, ಸಿದ್ದಪ್ಪ ಸುಟ್ಟನ್ನವರ, ರಾಮಪ್ಪ ಸೂಡಿ, ಪ್ರವೀಣ ಆಸಂಗಿ, ಶರಣವ್ವ ಸೂಡಿ, ಶಾಂತಾ ಆಡಿನ, ನಿರ್ಮಲ ಆಸಂಗಿ, ಕೆಂಚವ್ವ ಆಡಿನ, ರಾಮಪ್ಪ ಓಬಾಲಿ, ಹನುಮವ್ವ ಕುರಿ ಹಾಗೂ ಮಹಿಳೆಯರು ಇದ್ದರು.