ಕೋಲಿ ಸಮಾಜ ಒಗ್ಗಟ್ಟಾಗಿ

ಗುರುಮಠಕಲ್: ರಾಜ್ಯದಲ್ಲೂ ಬಹುಸಂಖ್ಯಾತರಾಗಿರುವ ಕೋಲಿ ಸಮಾಜದ ಜನತೆ ಮೊದಲು ಒಗ್ಗಟ್ಟಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರು ಸಲಹೆ ನೀಡಿದರು.
ಗುರುವಾರ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಕೋಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋಲಿ ಸಮಾಜದ ಒಗ್ಗಟ್ಟಾಗದಿದ್ದರೆ ಸರ್ವನಾಶ ಕಟ್ಟಿಟ್ಟ ಬುತ್ತಿ. ಈ ಕಹಿಸತ್ಯವನ್ನು ಸಮಾಜದ ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಿದೆ ಎಂದರು.
ನಮ್ಮ ಸಮಾಜದ ಆರಾಧ್ಯದೈವವಾಗಿರುವ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಸಂದೇಶವನ್ನು ಯುವ ಜನತೆ ಪಾಲಿಸಬೇಕಿದೆ. ಅಹಿಂಸೋ ಪರಮೋ ಧರ್ಮ ಎಂಬ ಧ್ಯೇಯ ವಾಕ್ಯದೊಂದಿಗೆ ಮನುಕುಲವನ್ನು ಉದ್ಧರಿಸುತ್ತಿರುವ ಅಮ್ಮನವರ ಆಶೀರ್ವಾದ ಈ ಭಾಗದ ಜನರ ಮೇಲೆ ಸದಾ ಇದೆ ಎಂದು ಹೇಳಿದರು.
12ನೇ ಶತಮಾನದಲ್ಲಿನ ಶರಣರು ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಢ್ಯವನ್ನು ಬೇರು ಸಮೇತ ಕಿತ್ತೆಸೆಯಲು ತಮ್ಮ ವಚನಗಳನ್ನೇ ಅಸ್ತ್ರವನ್ನಾಗಿ ಮಾಡುಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅಂಥ ಶರಣರಲ್ಲಿ ಒಬ್ಬರಾಗಿರುವ ಅಂಬಿಗರ ಚೌಡಯ್ಯನವರ ವಚನಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್, ಮಾಲಿನಿ, ಮುಖಂಡರಾದ ಬಸ್ಸಣ್ಣ ದೇವರಹಳ್ಳಿಮ ಶರಣಯ್ಯ ಕಲಾಲ, ಅನಂತಪ್ಪ ಬೀಯಿ, ಆನಂದ ಯದ್ಲಾಪುರ, ಗಂಗಪ್ಪ ಗಾಜರಕೋಟ, ನಾರಾಯಣ ಎಂ.ಟಿ.ಪಲ್ಲಿ, ತಿಪ್ಪಣಪ್ಪ ಇಮ್ಲಾಪುರ, ಬಸವರಾಜ ಬಾಗ್ಲಿ, ಶರಣಪ್ಪ, ಮರೆಪ್ಪ, ಶರಣಪ್ಪ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.